ಪ್ರಮುಖ ಸುದ್ದಿ

ಟಿಪ್ಪು ಪಾಠ ಕೈಬಿಟ್ಟಿದ್ದು ಸರಿಯಲ್ಲ : ಎಂ.ಎ.ಉಸ್ಮಾನ್ ಆಕ್ಷೇಪ

ರಾಜ್ಯ( ಮಡಿಕೇರಿ) ಆ.4:- ನಾಡಿಗಾಗಿ ಹೋರಾಟ ನಡೆಸಿ ಪರಕೀಯರ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಿ ಪ್ರಾಣವನ್ನೇ ತ್ಯಾಗ ಮಾಡಿದ ಟಿಪ್ಪುಸುಲ್ತಾನ್, ರಾಣಿ ಅಬ್ಬಕ್ಕ ಹಾಗೂ ಸಂಗೊಳ್ಳಿ ರಾಯಣ್ಣರಂತಹ ಇತಿಹಾಸಕಾರರ ಪಾಠಗಳನ್ನು ಪಠ್ಯ ಪುಸ್ತಕಗಳಿಂದ ಕೈಬಿಟ್ಟಿರುವುದು ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರ ದೇಶ ಕಂಡ ಮಹಾನ್ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಟಿಪ್ಪುಸುಲ್ತಾನ್ ಸಹಿತ ಸ್ವತಂತ್ರ ಹೋರಾಟಗಾರರ ಹೆಸರನ್ನು ಮತ್ತೆ ಪಠ್ಯಪುಸ್ತಕದಲ್ಲಿ ಸೇರಿಸದಿದ್ದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಒಂದು ಸರ್ಕಾರ ವಾಸ್ತವ ಇತಿಹಾಸವನ್ನು ಅರಿತು ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆದರೆ ಈ ಸರ್ಕಾರ ಕೋಮುವಾದಿಗಳ ಹಾಗೂ ಸಂಘ ಪರಿವಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಅರಿತು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕಾದ ಮಕ್ಕಳ ಮನದಲ್ಲಿ ಕೋಮುದ್ವೇಷವನ್ನು ಹರಡುವ ಮತ್ತು ನೈಜ ಚರಿತ್ರೆಯನ್ನು ಅಳಿಸಿ ಹಾಕುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಜಾತ್ಯತೀತ ರಾಷ್ಟ್ರದಲ್ಲಿ ಹಲವು ಧರ್ಮಗಳಿದ್ದು ಧರ್ಮಗಳ ಮತ್ತು ಅವುಗಳ ಪ್ರತಿಪಾದಕರನ್ನು ತಿಳಿಯುವುದು ಹಾಗೂ ಅವುಗಳನ್ನು ಅರ್ಥೈಸಿಕೊಂಡು ಬದುಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದೇಶದ ಮುಂದಿನ ಪ್ರಜೆಗಳಾಗಿರುವ ಮಕ್ಕಳ ಮನಸ್ಸಿನಲ್ಲಿ ಇತಿಹಾಸವನ್ನು ಉಳಿಸುವ ಕಾರ್ಯವಾಗಬೇಕೆ ಹೊರತು ಕೋಮು ದ್ವೇಷಕ್ಕಾಗಿ ಅಳಿಸಿ ಹಾಕುವ ಪ್ರಯತ್ನಗಳು ನಡೆಯಬಾರದೆಂದು ಉಸ್ಮಾನ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನರ ಹೆಸರು ಸಂವಿಧಾನದಲ್ಲಿ ಉಲ್ಲೇಖವಿದ್ದರೂ ಬಿಜೆಪಿ ಸರಕಾರ ಈ ರೀತಿಯ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಸಂವಿಧಾನಕ್ಕೆ ಎಸಗುತ್ತಿರುವ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.
ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸರ್ವಜನರ ಒಳಿತಿಗಾಗಿ ಸೌಹಾರ್ದತೆಯಿಂದ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸರ್ಕಾರ ಗಮನ ಹರಿಸಲಿ ಎಂದು ಉಸ್ಮಾನ್ ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: