
ಮೈಸೂರು
ರಾಮಮಂದಿರ ಭೂಮಿಪೂಜೆಗೆ ಸುತ್ತೂರು ಶ್ರೀಗಳಿಗೂ ಆಹ್ವಾನ
ಮೈಸೂರು,ಆ.4:- ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸುವಂತೆ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ಆಹ್ವಾನ ಬಂದಿದ್ದು, ಕೋವಿಡ್ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿಶ್ವಹಿಂದು ಪರಿಷತ್ ಹಾಗೂ ಆರ್ ಎಸ್ ಎಸ್ ಮುಖಂಡರು ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಆಹ್ವಾನಿಸಿದ್ದರು. ಆದರೆ ಎಲ್ಲೆಡೆ ಕೊರೋನಾ ಹಾಗೂ ಭದ್ರತೆ ಹಿನ್ನೆಲೆಯಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂದು ಶ್ರೀಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇಡೀ ದೇಶವೇ ಸಂತೋಷ, ಸಂಭ್ರಮದಲ್ಲಿ ತೇಲುವ ಅಪೂರ್ವ ಧಾರ್ಮಿಕ ಆಚರಣೆಯಾಗಿದೆ. ಕೋಟಿ ಕೋಟಿ ಭಾರತೀಯರು ನೂರಾರು ವರ್ಷಗಳಿಂದ ಈ ಅಮೃತ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಭಕ್ತರೆಲ್ಲರು ತಾವು ಇರುವಲ್ಲಿಯೇ ಕಾರ್ಯಕ್ರಮ ವೀಕ್ಷಿಸಿ ಧನ್ಯರಾಗಬಹುದಾಗಿದೆ. ಭರತ ಖಂಡದ ಈ ‘ನ ಭೂತೋ ನ ಭವಿಷ್ಯತಿ ‘ ಎಂಬ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ. ಮಂದಿರ ನಿರ್ಮಾಣ ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳಲೆಂದು ಹಾರೈಸಿದ್ದಾರೆ. (ಕೆ.ಎಸ್,ಎಸ್.ಎಚ್)