ಪ್ರಮುಖ ಸುದ್ದಿಮೈಸೂರು

ಕೇರಳದ ವೈನಾಡಿನಲ್ಲಿ ಭಾರೀ ಮಳೆ : ಕಪಿಲಾ‌ ನದಿ‌ತಟದಲ್ಲಿ ಪ್ರವಾಹದ ಭೀತಿ

ಮೈಸೂರು, ಆ.6:- ಕಳೆದೆರಡು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಕಳೆದ ಒಂದು ವಾರದಿಂದ ಕೇರಳದ ವೈನಾಡಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಮೈಸೂರಿನ ಕಬಿನಿ ಜಲಾನಯನ ಪ್ರದೇಶದಲ್ಲಿ ಮತ್ತೆ ಕಂಕಟ ಎದುರಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಕೇರಳದಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಬರುತ್ತಿದ್ದು, ಅಷ್ಟೇ ಪ್ರಮಾಣ ಹೊರಹರಿವನ್ನು ಜಲಾಶಯದಿಂದ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಪಿಲಾ‌ ನದಿ‌ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ನಂಜನಗೂಡಿನಲ್ಲಿ ಕಪಿಲಾ ನದಿ ಮೈ ದುಂಬಿ ಹರಿಯುತ್ತಿದ್ದು, ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭರ್ತಿಯಾಗಿದೆ. ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ ಹಿನ್ನಲೆಯಲ್ಲಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚು ನೀರು ಬಿಡುಗಡೆಯಾದ ಹಿನ್ನೆಲೆ ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದು, ಪ್ರವಾಹದಿಂದ ಈಗ ನಂಜನಗೂಡಿನ ಕಪಿಲಾ ನದಿ ಸ್ನಾನಘಟ್ಟ ಮುಳುಗಡೆಯಾಗಿದೆ.

ಇಂದು ನಾಳೆ ಇನ್ನೂ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ನಂಜನಗೂಡಿನ ತೋಪಿನ ಬೀದಿ, ಹಳ್ಳದಕೇರಿ, ಕುರುಬಗೇರಿ, ಮೇದರಗೇರಿ, ಸರಸ್ವತಿ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳ ಜನತೆಯಲ್ಲಿ ಆತಂಕ ಎದುರಾಗಿದೆ. ಕಳೆದ ಬಾರಿ ಕೂಡ ಪ್ರವಾಹದಿಂದ ನೂರಾರು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಮತ್ತೇ ಆತಂಕದಲ್ಲಿ ಕುಟುಂಬದ ಜನರು ಇದ್ದಾರೆ. ಕಬಿನಿ ಜಲಾಶಯದ ಇಂದಿನ ಒಳಹರಿವು 45.600 ಕ್ಯೂಸೆಕ್ ಇದ್ದು, ಜಲಾಶಯದ ಇಂದಿನ ಹೊರಹರಿವು ಒಟ್ಟು 50,000 ಕ್ಯೂಸೆಕ್ ಇದೆ. ಜಲಾಶಯದ ಇಂದಿನ ನೀರಿನ ಮಟ್ಟ 2280.81 ಅಡಿಗಳಾಗಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ ಇದ್ದು ಜಲಾಶಯ ಭರ್ತಿಗೆ ಇನ್ನು ನಾಲ್ಕು ಅಡಿ ಮಾತ್ರ ಬಾಕಿದೆ ಇದೆ. ಒಟ್ಟು 19.52 ಟಿ. ಎಂ. ಸಿ. ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 16.70 ಟಿ. ಎಂ. ಸಿ. ನೀರು ಸಂಗ್ರಹವಾಗಿದೆ.ಅತ್ತ ನುಗು ಕಿರು ಜಲಾಶಯದಿಂದಲು ನೀರು ಬಿಡುಗಡೆಯಾಗಿದೆ. ಜಲಾಶಯದಿಂದ 1960 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆ ಜಲಾಶಯದ ಭರ್ತಿಗೆ 1 ಅಡಿ ಮಾತ್ರ ಬಾಕಿ ಇದೆ. 2380 ಅಡಿಗಳು ಜಲಾಶಯ ಗರಿಷ್ಠ ಮಟ್ಟವಾಗಿದ್ದು,ಸದ್ಯ 2379 ಅಡಿ ತುಂಬಿರುವ ನುಗು ಕಿರು ಜಲಾಶಯದಲ್ಲಿ ಸಂಪೂರ್ಣ ಒಳಹರಿವು ಹೊರಕ್ಕೆ ಬಿಡಲಾಗುತ್ತಿದೆ. ಈ ಎರಡೂ ಜಲಾಶಯಗಳು ಮೈಸೂರಿನ ಹೆಚ್.ಡಿ.ಕೋಟೆಯ ತಾಲೂಕಿನಲ್ಲೇ ಇವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: