ಕರ್ನಾಟಕನಮ್ಮೂರುಮನರಂಜನೆಮೈಸೂರು

ಕನ್ನಡ ನಾಡಿನ ಕಂಪು ಸೂಸಿದ ಯುವಸಂಭ್ರಮ

ವಾರದಿಂದ ನಡೆಯುತ್ತಿದ್ದ ಯುವ ಸಂಭ್ರಮದ ಝಲಕ್ ‍ಗೆ ತುಂತುರು ಮಳೆಯ ನಡುವೆ ಬುಧವಾರ ತೆರೆ ಬಿದ್ದಿತು. ಕನ್ನಡ ನಾಡು ನುಡಿ, ದೇಶ  ಪ್ರೇಮದ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ರಂಜಿಸುತ್ತಿದ್ದರೆ, ಪ್ರೇಕ್ಷಕರಿಂದ ಕರತಾಡನದ ಸದ್ದು ಮೊಳಗುತ್ತಿತ್ತು.

ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ಯುವದಸರಾ ಉಪಸಮಿತಿಯು ಏರ್ಪಡಿಸಿದ್ದ ‘ಯುವ ಸಂಭ್ರಮ’ ದಲ್ಲಿ ಕನ್ನಡದ ಅಭಿಮಾನ ಉತ್ತುಂಗ ಶಿಖರಕ್ಕೇರಿತ್ತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮೋಹಕ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು ವಿದ್ಯಾರ್ಥಿಗಳು ‘ಜೀವ ಕನ್ನಡ, ನಾಡು ಕನ್ನಡ, ನುಡಿ ಕನ್ನಡ’ ಎಂಬ ಗೀತೆಗೆ ನೃತ್ಯ ಮಾಡಿ ಭಾಷಾಭಿಮಾನ ಮೆರೆದರು.

ಹಾಸನದ ಭಾರತೀಯ ವಿದ್ಯಾಶಾಲೆ ವಿದ್ಯಾರ್ಥಿನಿಯರು ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದರು. ‘ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಚಾರಿ….’ ‘ಹಚ್ಚೇವು ಕನ್ನಡದ ದೀಪ..’ಗೀತೆಗಳಿಗೆ ನರ್ತಿಸಿ ರಂಜಿಸಿದರು.

ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ‘ಮಹಿಳಾ ಸಬಲೀಕರಣ’ ನೃತ್ಯ ರೂಪಕ ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯವನ್ನು ತಡೆಯುವ ಬಗ್ಗೆ ನೃತ್ಯ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನದ ಎನ್ ಡಿ ಆರ್ ಕೆ ಪ್ರಥಮ ದರ್ಜೆ ಕಾಲೇಜಿನ ತ್ರಿಯಾಂಬಿಕ ಅನುಗ್ರಹ  ನೃತ್ಯ ರೂಪಕ ಭರತನಾಟ್ಯದ ಭಂಗಿಗಳಿಗೆ ಸಾಕ್ಷಿಯಾಯಿತು. ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಪ್ರದರ್ಶಿಸಿದ ಅಂಬೇಡ್ಕರ್ ಬಗೆಗಿನ ನೃತ್ಯರೂಪಕ ಮೆಚ್ಚುಗೆ ಪಡೆಯಿತು.

ಕೆ,ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ ಗೀತೆಗೆ ನೃತ್ಯ ಪ್ರದರ್ಶನ ಮಾಡಿ ಸೈನಿಕರ ಹೋರಾಟ, ದೇಶ ರಕ್ಷಣೆ ಸನ್ನಿವೇಶವನ್ನು ತೆರೆದಿಟ್ಟರು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿಗಳು ‘ಕನ್ನಡ ನಾಡಿನ ಜೀವನದಿ’ ಹಾಡಿಗೆ ಸಮೂಹ ನೃತ್ಯ ಮಾಡಿ ಸಂಭ್ರಮಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಭಾಷಾಭಿಮಾನದ ಗೀತೆಗಳು ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾದವು.  ‘ವಕ್ರತುಂಡ ಮಹಾಕಾಯ..’ ಗೀತೆಯ ಮೂಲಕ ಆರಂಭವಾದ ನೃತ್ಯದಲ್ಲಿ ‘ಕನ್ನಡ ರೋಮಾಂಚನವೀ ಕನ್ನಡ…’ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ…’ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ..’ ಗೀತೆಗಳಿಗೆ ನೃತ್ಯ ರೂಪಕ ಹೆಜ್ಜೆ ಹಾಕಿದರು.

ಪ್ರೇಕ್ಷಕರು ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಹುಚ್ಚೆದ್ದು ಕುಣಿದರು. ಕೊನೆಯ ದಿನವಾದ್ದರಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

 

Leave a Reply

comments

Tags

Related Articles

error: