ಕರ್ನಾಟಕಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ಕರ್ನಾಟಕಕ್ಕೆ 2 ಎಕರೆ ಭೂಮಿ ನೀಡಿ: ಯುಪಿ ಸಿಎಂಗೆ ಬಿಎಸ್ವೈ ಪತ್ರ

ಬೆಂಗಳೂರು,ಆ.8-ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಯೋಧ್ಯೆಯಲ್ಲಿ ಕರ್ನಾಟಕಕ್ಕೆ ಎರಡು ಎಕರೆ ಭೂಮಿ ನೀಡಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ.

ಯಡಿಯೂರಪ್ಪ ಅವರು ಯೋಗಿ ಆದಿತ್ಯನಾಥ್ ಗೆ ಬರೆದಿರುವ ಪತ್ರದಲ್ಲಿ ಆ.5 ರಂದು ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯದಿಂದ ಅಯೋಧ್ಯೆಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಹಾಗಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರಕ್ಕೆ 2 ಎಕರೆ ಭೂಮಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಿಂದ ಅಯೋಧ್ಯೆಗೆ ಭಕ್ತರು ಭೇಟಿ ನೀಡುತ್ತಾರೆ. ಅವರಿಗಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕಾಗಿದೆ. ಈ ಉದ್ದೇಶದಿಂದ ಕರ್ನಾಟಕಕ್ಕೆ ಉತ್ತರಪ್ರದೇಶ ಸರ್ಕಾರ ಎರಡು ಎಕರೆ ಜಾಗ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಹಲವು ದಶಕಗಳ ಅಯೋಧ್ಯೆ ಸಮಸ್ಯೆ ಸುಪ್ರೀಂಕೋರ್ಟ್​ನಲ್ಲಿ ತೀರ್ಮಾನವಾಗಿ, ರಾಮಮಂದಿರ ನಿರ್ಮಾಣಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿತ್ತು. ಇದೇ ತಿಂಗಳ 5ನೇ ತಾರೀಖು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. (ಎಂ.ಎನ್)

Leave a Reply

comments

Related Articles

error: