ಕರ್ನಾಟಕಪ್ರಮುಖ ಸುದ್ದಿ

ಕೊಡಗು ಬ್ರಹ್ಮಗಿರಿ ಬೆಟ್ಟ ಕುಸಿತ: ರಕ್ಷಣಾ ಕಾರ್ಯಚರಣೆ ಆರಂಭ; ಒಂದು ಮೃತದೇಹ ಪತ್ತೆ

ಮಡಿಕೇರಿ,ಆ.8-ಭಾರೀ ಮಳೆಯಿಂದಾಗಿ ಜಿಲ್ಲೆಯ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಬಿದ್ದಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, ಒಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ.

ಹೊರ ತೆಗೆಯಲಾಗಿರುವ ಮೃತದೇಹದ ಗುರುತು ಪತ್ತೆಯಾಗಿಲ್ಲ. ಅಲ್ಲದೆ, ನಾಪತ್ತೆಯಾಗಿದ್ದ ಕೆಲವು ಜಾನುವಾರುಗಳ ಕಳೆಬರ ಇಂದು ಪತ್ತೆಯಾಗಿದೆ.

ಗುರುವಾರ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಮತ್ತು ಅವರ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು. ಇನ್ನೂ ಅವರು ಪತ್ತೆಯಾಗಿಲ್ಲ. ಶುಕ್ರವಾರವೂ ಮಳೆಯ ಕಾರಣದಿಂದ ಕಾರ್ಯಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಅರ್ಚಕರ ಕುಟುಂಬ ಮಣ್ಣಿನಡಿ ಸಿಲುಕಿ ಎರಡು ದಿನಗಳ ಮೇಲಾಗಿದೆ. ಹೀಗಾಗಿ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಸ್ವಲ್ಪ ಮಳೆ ಕಡಿಮೆಯಾದ ಕಾರಣ ಕಾರ್ಯಾಚರಣೆ ನಡೆಸಲಾಯಿತು. ಆದರೆ ಮತ್ತೆ ಮಳೆ ಆರಂಭವಾಗಿ ರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸಂಜೆ ಮೂರು ಗಂಟೆಯ ನಂತರ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.

ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆಯಲ್ಲಿ ನೀರು ತುಂಬಿರುವ ಕಾರಣ ಜೆಸಿಬಿ ಹಿಟಾಟಿ ಯಂತ್ರಗಳಿಗೆ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳೊಂದಿಗೆ ಸಚಿವ ಸೋಮಣ್ಣ ಸಭೆ: ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮುಖ್ಯಮಂತ್ರಿಗಳು ಕೂಡ ತಲಕಾವೇರಿ ಬೆಟ್ಟ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಹಾರ ಕಾರ್ಯವನ್ನು ಆರಂಭಿಸಲೇ ಬೇಕು ಎಂದು ಸಿಎಂ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು. (ಎಂ.ಎನ್)

Leave a Reply

comments

Related Articles

error: