ದೇಶಪ್ರಮುಖ ಸುದ್ದಿ

ಕೇರಳ ವಿಮಾನ ದುರಂತ: ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಕೇರಳ ಸರ್ಕಾರ

ಕೋಯಿಕ್ಕೋಡ್,ಆ.8-ಇಲ್ಲಿನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದ ಬೆನ್ನಲ್ಲೇ ಕೇರಳ ಸರ್ಕಾರ ಕೂಡ ಪರಿಹಾರ ಘೋಷಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಮಾನ ದುರಂತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಿಎಂ ಕಚೇರಿ ಕೂಡ ಟ್ವೀಟ್ ಮಾಡಿದೆ.

ಸಂತ್ರಸ್ತರಿಗೆ ಪರಿಹಾರ ಮಾತ್ರವಲ್ಲದೆ ವಿಮಾನ ಅಪಘಾತದಲ್ಲಿ ಗಾಯಗೊಂಡ ಎಲ್ಲರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅವರು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಈ ವೆಚ್ಚವನ್ನು ಭರಿಸಲಾಗುವುದು ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್‌ 1344 ವಿಮಾನವು ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಇಬ್ಭಾಗವಾಗಿತ್ತು. ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್‌ ದೀಪಕ್‌ ಸಾಠೆ ಹಾಗೂ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ ಸೇರಿದಂತೆ 18 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದಾರೆ. (ಎಂ.ಎನ್)

 

 

 

Leave a Reply

comments

Related Articles

error: