
ಮೈಸೂರು
ಶಾರ್ಟ್ ಸರ್ಕ್ಯೂಟ್ : ಹಳೆಯ ಮನೆ-ದಿನಸಿ ಅಂಗಡಿ ಸುಟ್ಟು ಕರಕಲು
ಮೈಸೂರು,ಆ.10:- ಶಾರ್ಟ್ ಸರ್ಕ್ಯೂಟ್ ನಿಂದ ಶತಮಾನ ಕಂಡ ಹಳೆಯ ಮನೆ ಮತ್ತು ದಿನಸಿ ಅಂಗಡಿಯಲ್ಲಿದ್ದ ಪದಾರ್ಥಗಳು ಸುಟ್ಟು ಕರಕಲಾದ ಘಟನೆ ದೇವರಾಜ ಮೊಹಲ್ಲಾದಲ್ಲಿ ನಡೆದಿದೆ.
ವಸಂತ್ ಕುಮಾರ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಅಂಗಡಿ ಕೂಡ ಅವರದ್ದೇ ಆಗಿತ್ತು. ನಿನ್ನೆ ಮಧ್ಯಾಹ್ನದ ವೇಳೆ ವ್ಯಾಪಾರ ಮಾಡುತ್ತಿದ್ದಾಗಲೇ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಕಂಡ ಅಕ್ಕಪಕ್ಕದವರು ವಸಂತ್ ಕುಮಾರ್ ಅವರಿಗೆ ಮಾಹಿತಿ ನೀಡಿದರು. ವಸಂತ್ ಕುಮಾರ್ ಅಂಗಡಿಯಿಂದ ಹೊರಬಂದು ನೋಡಿದಾಗ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಒಂದು ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಆರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮನೆ ಮತ್ತು ದಿನಸಿ ಪದಾರ್ಥಗಳು ಸುಟ್ಟು ಸಂಪೂರ್ಣ ಭಸ್ಮವಾಗಿವೆ. ಸುಮಾರು 2ಲಕ್ಷರೂ.ನಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)