
ದೇಶಪ್ರಮುಖ ಸುದ್ದಿ
ಕೇರಳಾದ್ಯಂತ ಧಾರಾಕಾರ ಮಳೆ: ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ತಿರುವನಂತಪುರ,ಆ.10-ದೇವರ ನಾಡು ಕೇರಳಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಲ್ಲದೆ, ಮುಂದಿನ ಕೆಲವು ದಿನಗಳ ಕಾಲ ಕೇರಳ ಭಾರೀ ಮಳೆಗೆ ತುತ್ತಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಅಲಪ್ಪುಳ, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಲಪ್ಪುರಂ, ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕೊಲ್ಲಂ, ಪಟ್ಟಣಂತಿಟ್ಟ, ಕೊಟ್ಟಯಂ, ಎರ್ನಾಕುಳಂ, ತೃಶ್ಶೂರ್, ಪಾಲಕ್ಕಾಡ್ಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರೆಡ್ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 204.5 ಮಿ.ಮೀ. ಮಳೆಯಾಗಲಿದ್ದು, ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದೂ ಇಲಾಖೆ ಹೇಳಿದೆ.
ಭೂಕುಸಿತ ಸೇರಿದಂತೆ ಅಪಾಯಕಾರಿ ಪ್ರದೇಶಗಳಿಂದ ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಜನರಿಗೆ ನಿರ್ದೇಶನ ನೀಡಲಾಗಿದೆ. ರಾತ್ರಿ ಹೊತ್ತು ಪ್ರಯಾಣ ಮಾಡದಂತೆ ಹಾಗೂ ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ.
ಭಾರೀ ಮಳೆಯಿಂದಾಗಿ ಪಟ್ಟಣಂತಿಟ್ಟದ ಪಂಬಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟಕ್ಕೇರಿದ ಹಿನ್ನೆಲೆಯಲ್ಲಿ, ನಿನ್ನೆ ಡ್ಯಾಂನ 6 ಕ್ರಸ್ಟ್ಗೇಟ್ಗಳನ್ನು ತೆರೆದು ನೀರು ಬಿಡಲಾಗಿದೆ.
ನಿನ್ನೆ ನಾಲು ಮಣಿಕಟ್ಟು ಎಂಬಲ್ಲಿ ಕಾರೊಂದು ಸ್ಕಿಡ್ ಆಗಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಸತತ 4 ಗಂಟೆಗಳ ಶೋಧ ಕಾರ್ಯದ ಬಳಿಕ ಕಾರು ಪತ್ತೆಯಾಗಿದ್ದು, ಒಳಗಿದ್ದ ಚಾಲಕ ಜಸ್ಟಿನ್ ಅಸುನೀಗಿದ್ದಾರೆ. (ಎಂ.ಎನ್)