ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ

ಮೈಸೂರು,ಆ.10:- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ಮಾಲೀಕರ ಪರವಾದ ಕಾಯ್ದೆ ತಿದ್ದುಪಡಿಯಿಂದ ಈಗಾಗಲೇ ಕೋವಿಡ್-19 ಮಹಾವ್ಯಾಧಿಯಿಂದ ತತ್ತರಿಸಿರುವ ಕಾರ್ಮಿಕ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಹಲವಾರು ಕೈಗಾರಿಕೆಗಳ ಮಾಲೀಕರು ಕೋವಿಡ್-19 ನೆರಳಿನಲ್ಲಿ ಕಾಯ್ದೆಗಳ ಉಲ್ಲಂಘನೆ, ಸಂಬಳ ಕಡಿತ, ಸವಲತ್ತುಗಳ ನಿರಾಕರಣೆ, ಗುತ್ತಿಗೆ ಕಾರ್ಮಿಕರ ಕೆಲಸ ನಿರಾಕರಣೆ,  ಮಾಡಿರುವ ಕೆಲಸಕ್ಕೂ ಸಂಬಳ ನೀಡದೆ ಇರುವ ಹಲವಾರು ನಿದರ್ಶನಗಳಿವೆ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ಮತ್ತು ಸರಕಾರಕ್ಕೆ ಹಲವಾರು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಮಾಲೀಕರ ಪರವಾದ ನಿಲುವುಗಳನ್ನು ತೆಗೆದುಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕ ವಿರೋಧಿ ಮತ್ತು ಮಾಲೀಕರಿಗೆ ಅನುಕೂಲಕರವಾಗುವ ರೀತಿ ಕಾಯ್ದೆಗಳನ್ನು ಜಾರಿ ಮಾಡಿರುವುದರಿಂದ ಮಾಲೀಕರಿಗೆ ಕಾರ್ಮಿಕರನ್ನು ಇನ್ನೂ ಹೆಚ್ಚಿನ ಶೋಷಣೆ ಮಾಡಲು ಸರ್ಕಾರವೇ ಅವಕಾಶವನ್ನು ಮಾಡಿಕೊಟ್ಟಂತಾಗಿದೆ ಎಂದು ದೂರಿದರು. ಆದ್ದರಿಂದ ಜೆಸಿಟಿಯು ಈ ಸರ್ಕಾರ ಕಾರ್ಮಿಕ ವಿರೋಧಿ ನೀತಿಯ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸುವುದರೊಂದಿಗೆ ಕಾರ್ಮಿಕ ವಿರೋಧಿ ಸರ್ಕಾರದ ನೀತಿಯನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು.

ಕೋವಿಡ್-19 ಸಮರ್ಥವಾಗಿ ನಿಯಂತ್ರಿಸಿ, ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಪ್ರತಿ ಕುಟುಂಬಕ್ಕೆ 6ತಿಂಗಳು ರೂ.7500ನೇರ ನಗದು ವರ್ಗಾವಣೆ ಮಾಡಿ, ಪ್ರತಿಯೊಬ್ಬರಿಗೂ 6ತಿಂಗಳ ತಲಾ 10ಕೆಜಿ ಆಹಾರಧಾನ್ಯ ವಿತರಿಸಿ, ಕಾರ್ಮಿಕ ಕಾನೂನು, ಎಪಿಎಂಸಿ ಕಾಯ್ದೆ ಮತ್ತು ಭೂಸ್ವಾಧೀನ ಮಸೂದೆ ತಿದ್ದುಪಡಿ ಹೊಂಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನಕಾರ್ಯದರ್ಶಿಗಳಾದ ಹೆಚ್.ಆರ್.ಶೇಷಾದ್ರಿ,  ಜಿ.ಜಯರಾಂ, ಚಂದ್ರಶೇಖರ ಮೇಟಿ, ಅನಿಲ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: