ಮೈಸೂರು

ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಕೆ.ಎಸ್.ಶಿವರಾಮು ಒತ್ತಾಯ

ನಾಳೆ ಪತ್ರ ಚಳವಳಿ

ಮೈಸೂರು,ಆ.10:- ಪೂರ್ವಾಗ್ರಹ ಪೀಡಿತರಾಗಿ ನಡೆಸುತ್ತಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಕ.ರಾ.ಹಿಂ.ವ.ಜಾ.ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಪಿಎಸ್ ಸಿಯು ಆ.24ರಂದು ಕೆ ಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಮುಂದಾಗಿದ್ದು, ಅದರಿಂದ ಆಗುವ ತೊಂದರೆಗಳ ಬಗ್ಗೆ ಚಿಂತನೆ ನಡೆಸದೆ ಪೂರ್ವಾಗ್ರಹ ಪೀಡಿತವಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಹೊರಟಿರುವುದು ಹಲವಾರು ಅನಾಹುತಗಳಿಗೆ ಹಾಗೂ ಅನುಮಾನಗಳಿಗೆ ದಾರಿಮಾಡಿಕೊಡುತ್ತಿದೆ. ಕೇವಲ ಕನಿಷ್ಠ ಜ್ಞಾನವನ್ನು ಕೆಪಿಎಸ್ ಸಿ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಅರಿಯದೇ ಇರುವುದು ಅತ್ಯಂತ ವಿಷಾದದ ಸಂಗತಿ. ಈ ಕೂಡಲೇ ಕೆಪಿಎಸ್ ಸಿಯು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದರು. ಇದೇ ವರ್ಷ ಕೆಎಎಸ್ ಪರೀಕ್ಷೆ ಮಾಡಬೇಕಾದ ಅನಿವಾರ್ತೆ ಕೆಪಿಎಸ್ ಸಿಗೇನಿದೆ. ಇದಕ್ಕಿಂತ ಮೊದಲು ಮಾಡಬೇಕಾದ ಎಫ್ ಡಿಎ  ಪರೀಕ್ಷೆಗಳ ಬಗ್ಗೆ ಕೆಪಿಎಸ್ ಸಿ ಏಕೆ ಮಾತನಾಡುತ್ತಿಲ್ಲ, ಕೆಎಎಸ್ ಹುದ್ದೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಹಿಂದಿನ ಕರಾಳ ಮುಖ ಸಾರ್ವಜನಿಕರಿಗೆ ಗೋಚರಿಸುತ್ತದೆ ಎಂದರು.

ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದು 10-12ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗಿದೆ. ಜನರು ಸಾವು ಬದುಕಿನ ನಡುವೆ ಹೋರಾಡುವಾಗ ಸರ್ಕಾರವು ಇದರ ರಕ್ಷಣೆಯಲ್ಲಿ ತೊಡಗಿರುವಾಗ ಕೆಪಿಎಸ್ ಸಿಗೆ ಈ ಪರೀಕ್ಷೆ ಅಷ್ಟೊಂದು ಮುಖ್ಯ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ರಾಜ್ಯದಲ್ಲಿ ಒಂದು ದಿನಕ್ಕೆ 7500ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಆ.24ರವೇಳೆ ಹತ್ತರಿಂದ ಹನ್ನೆರಡು ಸಾವಿರ ಆಗಲಿದೆ ಎಂದು ಹೇಳುತ್ತಿರುವಾಗ ಇಂತಹ ಭಯದ ವಾತಾವರಣದಲ್ಲಿ ಗರ್ಭಿಣಿಯರು ಇತರೆ ಕಾಯಿಲೆಗಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ನಿರ್ಭಯವಾಗಿ ಬಂದು ಪರೀಕ್ಷೆ ಎದುರಿಸಲು ಸಾಧ್ಯವೇ? ಇದು ಕೆಪಿಎಸ್ ಸಿಯ ತಿಳುವಳಿಕೆಗೆ ಬಂದಿಲ್ಲವೇ? ಇದನ್ನು ಎಸ್ ಎಸ್ ಎಲ್ ಸಿ ,ಪಿಯುಸಿ ಮಕ್ಕಳ ಪರೀಕ್ಷೆಗೆ ಹೋಲಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

30 ಜಿಲ್ಲೆಗಳಿಂದ 6ಜಿಲ್ಲೆಗಳಲ್ಲಿ ಪರೀಕ್ಷೆ ಬರೆದು ಪುನಃ ತಮ್ಮ ತಮ್ಮ ಊರುಗಳಿಗೆ ತೆರಳಲು ಬೇಕಾಗಿರುವ ಎಲ್ಲಾ ಸೌಕರ್ಯ ಕೆಪಿಎಸ್ ಸಿ ಮಾಡಲಿ. ಅವರು ತೆಗೆದುಕೊಂಡು ಹೋಗುವ ಕೋವಿಡ್-19ನಿಂದ ಅವರ ಮನೆಗಳಲ್ಲಿ ಯಾರಾದರೂ ವಯಸ್ಸಾದವರಿದ್ದು, ಮಕ್ಕಳಿದ್ದು, ಅವರಿಗೆ ಕೊರೋನಾ ಬಂದರೆ ಅವರ ಸಂಪೂರ್ಣ ಜವಾಬ್ದಾರಿಯನ್ನು ಕೆಪಿಎಸ್ ಸಿ ತೆಗೆದುಕೊಳ್ಳಲಿ, ಏನಾದರೂ ಅವರ ಜೀವ ಹೋದರೆ ಅವರ ಪ್ರಾಣಕ್ಕೆ ಬೆಲೆ ಕಟ್ಟಿ ಅವರ ಪರಿವಾರದ ಪೋಷಣೆ ಜವಾಬ್ದಾರಿ ಕೆಪಿಎಸ್ ಸಿ ಹೊರಲಿ, ನಂತರ ಕೆಎಎಸ್ ಪೂರ್ವಭಾವಿ ಪರೀಕ್ಷೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿ ನಾಳೆ ಬೆಳಿಗ್ಗೆ 11.30ಕ್ಕೆ ಮೈಸೂರು ಮಹಾನಗರಪಾಲಿಕೆಯ ಅಂಚೆ ಪೆಟ್ಟಿಗೆ ಎದುರು ಪತ್ರ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಸೋಸಲೆ ಮಹೇಸ್, ಯುವ ಮುಖಂಡ ಆರ್.ಕೆ.ರವಿ, ಲೇಖಕ ಪುನೀತ್ ಎನ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: