ಪ್ರಮುಖ ಸುದ್ದಿ

ಫೇಸ್ ಬುಕ್ ಪೋಸ್ಟ್ : ಶಾಸಕರ ಮನೆಗೆ ಬೆಂಕಿ : ಉದ್ವಿಗ್ನ ವಾತಾವರಣ ; ನೂರಕ್ಕೂ ಹೆಚ್ಚುಮಂದಿ ಬಂಧನ

ರಾಜ್ಯ(ಬೆಂಗಳೂರು)ಆ.12:-    ಯಾರೋ ಒಬ್ಬ ಮಾಡಿದ ಕೃತ್ಯಕ್ಕೆ ಕೆ.ಜೆ.ಹಳ್ಳಿಯಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ, ಬೆಂಕಿ ಹಚ್ಚಿ ದಾಂಧಲೆ ಮಾಡಿದ ಘಟನೆ ರಾತ್ರಿ ನಡೆದಿದೆ.

ಮೊಹಮದ್‌ ಪೈಗಂಬರ್‌ ಬಗ್ಗೆ ಶಾಸಕರ ಸೋದರಳಿಯ ಅವಹೇಳನಕಾರಿ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಂದು ಆರೋಪಿಸಿ ಈ ರೀತಿ ದಾಂಧಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದರು. ಇನ್ನೊಂದೆಡೆ ನಮಗೆ ನ್ಯಾಯ ಕೊಡಿಸಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಕುಟುಂಬದವರು ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆ ಮುಂದೆ ಧರಣಿ ನಡೆಸಿದರು.  ಈಗಾಗಲೇ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ನವೀನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಮಾಡುತ್ತಿದ್ದಾರೆ.

ಈ ನಡುವೆ ದಾಂಧಲೆ ನಡೆಸಿರುವ ಕಿಡಿಗೇಡಿಗಳು ರಸ್ತೆಯಲ್ಲಿ ಸಿಕ್ಕ ಸಿಕ್ಕವಾಹನಗಳಿಗೆ ಬೆಂಕಿಹಚ್ಚಿ ಆಸ್ತಿ ಪಾಸ್ತಿಗೆ ನಷ್ಟವನ್ನುಂಟು ಮಾಡಿದ್ದಾರೆ. ಪೊಲೀಸರು ಉದ್ರಿಕ್ತಗುಂಪಿನ ನಡುವೆ ಅಶ್ರುವಾಯು ಪ್ರಯೋಗ ಪ್ರಯೋಗ ಮಾಡಿದ್ದಾರೆ. ಇನ್ನು ಪೊಲೀಸ್‌ ಠಾಣೆಗೆ ನುಗ್ಗಿ ಡಿಸಿಪಿ ವಾಹನವನ್ನು ಧ್ವಂಸ ಮಾಡಿದ್ದಾರೆ.

ನಿನ್ನೆ  ರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿ ಶಾಸಕರ ಮನೆಗೆ ಹಾನಿ ಮಾಡಿದ್ದರ ಸಂಬಂಧ ಈಗಗಲೇ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುಲಕೇಶಿ ನಗರದ ಶಾಸಕ ಅಖಂಡ​ ಶ್ರೀನಿವಾಸ್​ ಅವರ ಮನೆ ಮೇಲೆ ಕಲ್ಲು ತೂರಾಟ ಹಿಂಸಾಚಾರಕ್ಕೆ ತಿರುಗಿದ್ದು. ಈಗಾಗಲೇ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು, 10 ಹೆಚ್ಚು ಪೊಲೀಸರೂ ಇದರಿಂದ ಗಾಯಗೊಂಡಿದ್ದಾರೆ.

ಕಿಡಿಗೇಡಿಗಳು ಮಾಡಿತ ಕೃತ್ಯಕ್ಕೆ ರಸ್ತೆಯಲ್ಲಿ ಹಾಗೂ ಠಾಣೆ ಎದುರೇ ವಾಹನಗಳು ಹೊತ್ತಿ ಉರಿದವು. ಕೈಯಲ್ಲಿ ಕಟ್ಟಿಗೆ ಹಾಗೂ ಕಲ್ಲು ಹಿಡಿದಿದ್ದ ನೂರಾರು ದುಷ್ಕರ್ಮಿಗಳು, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಕಿಟಕಿ ಗಾಜುಗಳನ್ನು ಒಡೆದರು. ಪುಲಿಕೇಶಿನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ಮಾಡಿದ್ದ ಕಿಡಿಗೇಡಿಗಳು, ವಿದ್ಯುತ್ ದೀಪ ಹಾಗೂ ಗಾಜುಗಳನ್ನು ಒಡೆದು ಹಾಕಿದರು. ಉದ್ವಿಗ್ನಗೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಗಲಾಟೆ ನಡೆದ ಕೆಲವೇ ನಿಮಿಷಗಳಲ್ಲಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ನಗರದ ಎಲ್ಲಾ ವಲಯಗಳ ಡಿಸಿಪಿ ಹಾಗೂ ಎಸಿಪಿಗಳನ್ನು ಕೆ.ಜಿ.ಹಳ್ಳಿ–ಡಿ.ಜೆ.ಹಳ್ಳಿಗೆ ಠಾಣೆಗೆ ಕರೆಸಿಕೊಂಡು ತುರ್ತು ಸಭೆ ನಡೆಸಿದರು. ಎರಡೂ ಠಾಣೆ ವ್ಯಾಪ್ತಿಯಲ್ಲೂ ಪುಂಡಾಟಿಕೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಎರಡೂ ಧರ್ಮದವರು ಅಣ್ಣ–ತಮ್ಮಂದಿರಂತೆ. ಯಾರೋ ‌ಕಿಡಿಗೇಡಿಗಳು ಮಾಡಿರುವ ತಪ್ಪು ಇದು. ನಾವು ಜಗಳ ಮಾಡಿಕೊಳ್ಳುವುದು ಬೇಡ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ನಾವೆಲ್ಲರೂ ಶಾಂತಿ ಕಾಪಾಡೋಣ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.

ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಿಂಸಾಚಾರ ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನನ್ನ ಫೇಸ್ ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆಂದು ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್ ಹೇಳಿದ್ದು, ಶೀಘ್ರವೇ ಪೊಲೀಸರ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಸಂಬಂಧ ಡಿ ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಸಕ ಜಮೀರ್ ಮತ್ತು ರಿಜ್ವಾನ್ ಅರ್ಷದ್ ಪರಿಸ್ಥಿತಿಯನ್ನು ತಹಬದಿಗೆ ತರಲು ಯತ್ನಿಸಿದರು.   ಈ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅಲ್ಲದೇ ಇಂದು ಈ ಠಾಣಾ ವ್ಯಪ್ತಿಯಲ್ಲಿ ಅನಾವಶ್ಯಕವಾಗಿ ಒಡಾಡುತ್ತಿರುವವರ ಮೇಲೆ ಪೊಲೀಸರು ಮುಲಾಜಿಲ್ಲದೇ ಲಾಠಿ ರುಚಿ ತೋರಿಸುತ್ತಿದ್ದು, ಯಾರು ಇತ್ತ ಸುಳಿಯಬಾರದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಅಲ್ಲದೇ ಇಂಥ ಘಟನೆ ಮರುಕಳುಹಿಸಬಾರದು ಎಂಬ ಕಾರಣಕ್ಕೆ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂಥ್‌ ಮತ್ತು ಗೃಹ ಸಚಿವರು ಹಿರಿಯ ಮತ್ತು ಕಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸಂಪೂರ್ಣ ಸ್ವತಂತ್ರ ನೀಡಿದ್ದಾರೆ. ಇದರಿಂದ ಮುಂಜಾನೆ 3 ಗಂಟೆಯವರೆಗೂ ನಡೆದ ಗಲಭೆ ಈಗ ಶಾಂತರೂಪ ತಳೆದಿದೆ.

ಇನ್ನು ಘಟನೆಯಲ್ಲಿ ಬಲಿಯಾದ ಇಬ್ಬರ ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಇರಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: