ದೇಶಪ್ರಮುಖ ಸುದ್ದಿ

ಪುಲ್ವಾಮಾದಲ್ಲಿ ಎನ್ ಕೌಂಟರ್: ಯೋಧ ಹುತಾತ್ಮ; ಉಗ್ರನ ಹತ್ಯೆ

ಶ್ರೀನಗರ,ಆ.12- ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ‍ಪುಲ್ವಾಮ ಜಿಲ್ಲೆಯಲ್ಲಿ ನಡೆದಿದೆ. ಇದೇ ವೇಳೆ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ.

ಪುಲ್ವಾಮ ಜಿಲ್ಲೆಯ ಕಮ್ರಾಜಿಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಭದ್ರತಾಪಡೆಯವರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಉಗ್ರರು ದಾಳಿ ನಡೆಸಿದ್ದರಿಂದ ಭದ್ರತಾ ಪಡೆಗಳ ಯೋಧರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಸೈನಿಕರಿಬ್ಬರು ಗಂಭೀರ ಗಾಯಗೊಂಡರು. ತಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಯೋಧರೊಬ್ಬರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನೂ, ಮೃತ ಉಗ್ರ ಯಾವ ಸಂಘಟನೆಗೆ ಸೇರಿದವನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎನ್‌ಕೌಂಟರ್‌ ನಡೆದ ಪ್ರದೇಶದಲ್ಲಿ ಎ.ಕೆ 47 ರೈಫಲ್‌ ಮತ್ತು ಕೆಲ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. (ಎಂ.ಎನ್)

 

 

Leave a Reply

comments

Related Articles

error: