ಕರ್ನಾಟಕಪ್ರಮುಖ ಸುದ್ದಿ

ನಡೆದಾಡುವ ದೇವರಿಗೆ 110ನೇ ಜನ್ಮದಿನಾಚರಣೆ

ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತಿಗಳಿಸಿದ  ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿಯವರಿಗಿಂದು 110ನೇ  ಜನ್ಮದಿನದ ಸಂಭ್ರಮ.

1908 ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮನವರ ಮಗನಾಗಿ ಜನಿಸಿದ 1941ರಲ್ಲಿ ಸಿದ್ದಗಂಗಾ ಮಠಾಧಿಪತಿಗಳಾದರು. ಅಂದಿನಿಂದ ಇಂದಿನವರೆಗೂ ಅವರು ಸಿದ್ಧಗಂಗಾ ಮಠದ ಪರಂಪರೆಯನ್ನು ಬೆಳಗಿಸಿಕೊಂಡು ಬರುತ್ತಿದ್ದಾರೆ.  ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ವ್ಯಕ್ತಿ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ ಬಸವಾದಿ ಪ್ರಮಥರ ನಡೆನುಡಿಗಳ ಪಥದಲ್ಲಿ, ಶರಣತತ್ವಗಳ ಪ್ರಸಾರದಲ್ಲಿ ಸತತ 85 ವರ್ಷಗಳ ಅಖಂಡ ಸೇವೆ ಸಲ್ಲಿಸುತ್ತಾ ವಿಶ್ವದ ಗಮನ ಸೆಳೆದಿದ್ದಾರೆ.

ಲಿಂಗಪೂಜೆ, ಜಂಗಮ, ದಾಸೋಹ, ಶರಣತತ್ವ ಕ್ರಿಯಾನುಷ್ಠಾನ ಸೇವಾನಿರತರಾದ ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ ಮಠವನ್ನು ಜಂಗಮ ಕ್ಷೇತ್ರವಾಗಿ ಮುನ್ನಡೆಸಿದ್ದಾರೆ. ತಮ್ಮ ಜನಾನುರಾಗಿ ಭಾವನೆಗಳಿಂದ, ಬಡವರ ಬಗೆಗಿನ ಅನುಕಂಪ, ಸಹಕಾರಗಳಿಂದ, ಶಿಸ್ತಿನ ಜೀವನದಿಂದ, ಮಾನವೀಯ ಗುಣಗಳಿಂದ, ಬಡವರು ಮತ್ತು ಹಿಂದುಳಿದವರ ಬಗೆಗಿರುವ ಕಾಳಜಿಯಿಂದ ಪ್ರಸಿದ್ಧಿ ಗಳಿಸಿದ್ದಾರೆ.ಇವರ ದಿನಚರಿ ರಾತ್ರಿ 2 ರಿಂದ 2.30ರ ವೇಳೆಗೆ ಆರಂಭವಾಗುತ್ತದೆ. ಪ್ರಾತಃವಿಧಿ, ಸ್ನಾನ, ಶಿವಪೂಜೆ ಮುಗಿಸಿ ಬೆಳಗಿನ ಜಾವ 5.30 ರಿಂದ 6ರ ವೇಳೆಗೆ ಕಚೇರಿಗೆ ತೆರಳುತ್ತಾರೆ. ಅಲ್ಲಿಂದ ರಾತ್ರಿ 9.30 ರವರೆಗೂ ತಮ್ಮನ್ನು ಒಂದಲ್ಲಾ ಒಂದು ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಳಿಕ ಸ್ನಾನ ಶಿವಪೂಜಾ ಕಾರ್ಯಗಳನ್ನು ಮುಗಿಸಿ ರಾತ್ರಿ 11 ಗಂಟೆ ವೇಳೆಗೆ ಶಿವಯೋಗ ನಿದ್ರಾ ಮುದ್ರೆಗೆ ತೆರಳುತ್ತಾರೆ.  ಇವರ ಈ ಚಟುವಟಿಕೆಯೇ ಮಠದ ವಿದ್ಯಾರ್ಥಿಗಳಿಗೆ, ಭಕ್ತ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ. 110ರ ಇಳಿವಯಸ್ಸಿನಲ್ಲೂ ಅದೇ ರೀತಿ ಕ್ರಿಯಾಶೀಲವಾಗಿ ಕಾಯಕದಲ್ಲಿ ತೊಡಗಿರುವ ಶ್ರೀಗಳು ದೈವಸ್ವರೂಪಿಗಳೆಂದೇ ಭಕ್ತ ಜನರ ಭಾವನೆ.    ಕರ್ನಾಟಕ ಸರ್ಕಾರವು 2007 ರಲ್ಲಿ ‘ಕರ್ನಾಟಕ ರತ್ನ’ ಹಾಗೂ  ಕೇಂದ್ರ ಸರ್ಕಾರವು 2015ರಲ್ಲಿ ‘ಪದ್ಮಭೂಷಣ’ ಪುರಸ್ಕಾರವನ್ನು ನೀಡಿ ಅವರನ್ನು ಗೌರವಿಸಿವೆ. ಜನ್ಮದಿನದ ಪ್ರಯುಕ್ತ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: