ಮೈಸೂರು

ಕೃಷ್ಣರಾಜ ಕ್ಷೇತ್ರದ ಕೋವಿಡ್-19 ಸಂಬಂಧಿಸಿದಂತೆ ಶಾಸಕ ರಾಮದಾಸ್ ನೇತೃತ್ವದಲ್ಲಿ ಸಮೀಕ್ಷೆ ಸಭೆ

ಮೈಸೂರು,ಆ.14:-  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ಕೋವಿಡ್-19 ಸಂಬಂಧಿಸಿದಂತೆ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್   ನೇತೃತ್ವದಲ್ಲಿಂದುಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಮತ್ತು ನಗರ ಪಾಲಿಕೆ ಆಯುಕ್ತರನ್ನು ಒಳಗೊಂಡಂತೆ ಸಮೀಕ್ಷೆ ಸಭೆಯನ್ನು ನಡೆಸಲಾಯಿತು.

ಮೈಸೂರಿನ ನಗರಕ್ಕೆ ಬರುವ ನಾಲ್ಕೂ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಕಾರ್ಯಪಡೆಯನ್ನು ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗುವ ತಿರ್ಮಾನಕ್ಕೆ ಸಂಬಂಧಿಸಿದಂತೆ ನಡೆದ ಕೃಷ್ಣರಾಜ ಕ್ಷೇತ್ರದ ಕೋವಿಡ್-19 ಟಾಸ್ಕ್ ಫೋರ್ಸ್ ಕಮಿಟಿ ನಿರ್ಮಿಸಿ ಕ್ಷೇತ್ರದ ವ್ಯಾಪ್ತಿಗೆ ಬರುವ 4 ವಲಯಗಳಲ್ಲಿ  ಕೋವಿಡ್-19 ಸೋಂಕಿತರು ಮತ್ತು  ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಆರೋಗ್ಯ ವಿಚಾರಿಸಲು   ಸಂಬಂಧಿಸಿದಂತೆ ವಲಯವಾರು ಪ್ರತ್ಯೇಕ ತಂಡಗಳನ್ನು ರಚಿಸಿದ್ದು ಕಳೆದ 4 ವಾರಗಳಿಂದ ಆಯಾ ವಲಯಗಳಲ್ಲಿ ಕ್ಷೇತ್ರಾದ್ಯಂತ ಸಂಬಂಧ ಅಧಿಕಾರಿಗಳು ಹಗಲು ರಾತ್ರಿ ದುಡಿಯುತ್ತಿದ್ದು ಇದಕ್ಕೆ ಶಾಸಕರು ಸಂಬಂಧಿಸಿದ ಅಧಿಕಾರಿಗಳನ್ನು ಶ್ಲಾಘಿಸಿ ಅಭಿನಂದಿಸಿದರು.

ಇದುವರೆಗೂ ಕೃಷ್ಣರಾಜ ಕ್ಷೇತ್ರದಲ್ಲಿ 963 ಸೋಂಕಿತರೆಂದು ದೃಢವಾಗಿದ್ದು ಅದರಲ್ಲಿ 557 ಸಕ್ರಿಯ ಪ್ರಕರಣಗಳಿವೆ.  ಒಟ್ಟು 373 ಕಂಟೈನ್ಮೆಂಟ್ ಜೋನ್ ಗಳಿದೆ. ಇದೇ ವೇಳೆ  ಜಿಲ್ಲಾಧಿಕಾರಿಗಳು ನೆರೆದಿದ್ದ 4 ವಲಯಗಳ ಅಧಿಕಾರಿಗಳಲ್ಲಿ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಪಡೆದರು.

ಇಲ್ಲಿಯವರೆಗೂ ಹಲವಾರು ಸಮಸ್ಯೆಗಳ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಬಗ್ಗೆ ಪ್ರಸ್ತಾಪಿಸಿದ   ಶಾಸಕರು ಆಯಾ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕೆಲವು ವಲಯಗಳ ಅಧಿಕಾರಿಗಳಿಗೆ ಕೋವಿಡ್-19 ನಿಂದ ಪಾಸಿಟಿವ್ ಆಗಿರುವುದರಿಂದ ಆಯಾ ಭಾಗದ ಕೆಲಸಗಳು  ಪೆಂಡಿಂಗ್ ಆಗುತ್ತಾ ಇದೆ ಎಂದು ಶಾಸಕರು ತಿಳಿಸಿದಕ್ಕೆ ಅಂತಹವರನ್ನು ಕೂಡಲೇ ಬದಲಿಸಿ ಕೆಲಸ ಕಾರ್ಯಗಳು ನಿಲ್ಲದಂತೆ ನೋಡಿಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.

ಸ್ವಾಬ್ ಪರೀಕ್ಷೆ ನಡೆಸುವ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗುತ್ತಿದ್ದು, ಈ  ವಿಷಯವಾಗಿ ಕಳೆದ 10 ದಿನಗಳ ಹಿಂದೆಯೇ ಆರೋಗ್ಯಾಧಿಕಾರಿಗಳಿಗೆ ಅರ್ಹರಿಗೆ ತರಬೇತಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರೂ ಇನ್ನೂ ಯಾವುದೇ ಕ್ರಮಗಳಾಗದೇ ಇರುವುದಕ್ಕೆ ಶಾಸಕರು ಆರೋಗ್ಯಾಧಿಕಾರಿಗಳಲ್ಲಿ ಪ್ರಶ್ನಿಸಿದ್ದಲ್ಲದೇ ತಕ್ಷಣದಲ್ಲಿಯೇ ತರಬೇತಿ ನೀಡಿ ಸಿಬ್ಬಂದಿ ಕೊರತೆ ನೀಗಿಸಲು ತಿಳಿಸಿದರು.

ಈಗಾಗಲೇ ಕೃಷ್ಣರಾಜ ಕ್ಷೇತ್ರದಲ್ಲಿ 3 ಸ್ವಾಬ್ ಪರೀಕ್ಷಾ ಕೇಂದ್ರಗಳು ಚಾಲ್ತಿಯಲ್ಲಿದ್ದು ವಾರ್ಡ್ ಸಂಖ್ಯೆ-57 ರ ಸೋಮಾನಿ ಕಾಲೇಜು ಹಿಂಭಾಗದ ಜಾಗದಲ್ಲಿ ( ಕುವೆಂಪುನಗರ, ಸರಸ್ವತಿಪುರಂ, ಶ್ರೀರಾಂಪುರ, ಟಿಕೆಲೇಔಟ್, ಶಾರದದೇವಿನಗರ ಭಾಗಗಳಿಗೆ) ಸ್ವಾಬ್ ಟೆಸ್ಟಿಂಗ್ ಕೇಂದ್ರಗಳನ್ನು ತೆರದರೆ ಅನುಕೂಲ ವಾಗಲಿದೆ ಎಂದು ತೀರ್ಮಾನಿಸಿ ಕ್ಷೇತ್ರಕ್ಕೆ ಮತ್ತೊಂದು ಸ್ವಾಬ್ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲು ನಿರ್ಧರಿಸಿ ಈ ಜವಾಬ್ದಾರಿಯನ್ನು ಪಾಲಿಕೆ ಆರೋಗ್ಯಾಧಿಕಾರಿಯಾದ ಡಾ. ನಾಗರಾಜ್ ಅವರಿಗೆ ವಹಿಸಲಾಯಿತು.

ಟೋಕನ್ ಪದ್ದತಿ ಕಾರ್ಯರೂಪಕ್ಕೆ ಸರಿಯಾಗಿ ಬರದೇ ಸ್ವಾಬ್ ಟೆಸ್ಟಿಂಗ್ ಕೇಂದ್ರಗಳಲ್ಲಿ ವಾರ್ಡ್ ಗಳಿಂದ ಕಳಿಸುವ ಪ್ರಾಥಮಿಕ ಸಂಪರ್ಕದವರಿಗೆ ತುಂಬ ಸಮಯ ಹಿಡಿಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಯಾ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯಾಧಿಕಾರಿಗಳಿಗೆ ಜವಾಬ್ದಾರಿ ನೀಡುವ ಮೂಲಕ ವ್ಯವಸ್ಥಿತವಾಗಿ ಪರೀಕ್ಷೆಯಾಗಬೇಕೆಂದು ತಿಳಿಸಿದರು. ಇದರ ಜವಾಬ್ದಾರಿಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕೈಗವಸುಗಳು(gloves), ಥರ್ಮಲ್ ಸ್ಕ್ಯಾನರ್, ಆಕ್ಸಿ ಮೀಟರ್, ಪಿ.ಪಿ.ಇ ಕಿಟ್, ಮಾಸ್ಕ್,  ಸರಿಯಾಗಿ ದೊರಕುತ್ತಿಲ್ಲ ಇದರಿಂದ ಪ್ರಾಥಮಿಕ ಸಂಪರ್ಕದವರನ್ನು ಕರದೊಯ್ಯುವ ಆಂಬುಲೆನ್ಸ್ ಚಾಲಕರು, ಕಂಟೈನ್ ಮೆಂಟ್ ಜೋನ್ ಗೆ ದಿನನಿತ್ಯ ಭೇಟಿ ನೀಡುವ ಅರೋಗ್ಯ ಅಧಿಕಾರಿಗಳು ಮತ್ತು ಅವರ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪ್ರತಿಯೊಂದು ವಲಯಕ್ಕೆ ಸರಿಯಾದ ಸಮಯಕ್ಕೆ ಅವಶ್ಯಕವಾಗಿರುವ ಪರಿಕರಗಳನ್ನು ಹೊಂದಿಸಿಕೊಡಲು ಡಾ. ನಾಗರಾಜ್ ರವರಿಗೆ ಸೂಚಿಸಲಾಯಿತು.

ಕೋವಿಡ್-19 ನಿಂದ ಸೋಂಕಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮಾಹಿತಿ ಅವರವರ ಮನೆಯರಿಗೆ ತಿಳಿಯದೇ ಗೊಂದಲಗಳಾಗುತಿದ್ದು ಇದನ್ನು ಬಗೆಹರಿಸಲು ಎಲ್ಲಾ ಆಸ್ಪತ್ರೆಗಳಲ್ಲಿ ಒಂದು ಪ್ರತ್ಯೇಕ  ದೂರವಾಣಿ ಸಂಖ್ಯೆನ್ನು ನಿಗದಿ ಪಡಿಸಿ ಮಾಹಿತಿ ದೊರಕಿಸಲು ನೋಡೆಲ್ ಅಧಿಕಾರಿ ಗಳಾದ ಮಂಜುನಾಥ್  ಅವರಿಗೆ ಸೂಚಿಸಿದರು.

ಕೋವಿಡ್  ಅಥವಾ ಕೋವಿಡ್ ಅಲ್ಲದೆ ಇರುವ ರೋಗಿಗಳನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಲು ಬಂದಾಗ ಕೋವಿಡ್ ಪರೀಕ್ಷಾ ವರದಿ ಕಡ್ಡಾಯವೆಂದು ಕೆಲವು ಆಸ್ಪತ್ರೆಗಳಲ್ಲಿ ದಾಖಲಿಸದೆ ಕಳುಸಹಿಸುತಿದ್ದ ಸಮಸ್ಯೆಯನ್ನು ಬಗೆಹರಿಸಲು ಮೈಸೂರಿನಲ್ಲಿ 1 ಪರೀಕ್ಷಾ ಕೇಂದ್ರವನ್ನು 24*7 ಗಂಟೆಗಳ ಕಾಲ ತೆರಯಲು ನಿರ್ಧರಿಸಲಾಯಿತು.

ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರಿಗೆ ಬಹಳಾ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಬೆಡ್ ಗಳನ್ನು ಹೆಚ್ಚಿಸಲು ಹಾಗೂ ಕೋವಿಡ್ ಇರಲೀ ಅಥವ ಇಲ್ಲದೇ ಇದ್ದರೂ ಪ್ರತ್ಯೇಕವಾಗಿ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಬೇಕೆಂದು ತೀರ್ಮಾನಿಸಲಾಯಿತು.

ಕೋವಿಡ್ ಸೋಂಕಿತರು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗುವವರಲ್ಲಿ ಆಯುಷ್ಮಾನ್ ಭಾರತ್  ಯೋಜನೆಗೆ ಅರ್ಹರಾಗಿರುವವರಿಗೆ ಆಯುಷ್ಮಾನ್ ಭಾರತ್  ಯೋಜನೆಡಿಯಲ್ಲಿ ಚಿಕಿತ್ಸೆ ಕೊಡಿಸಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಸ್ವಾಬ್ ಟೆಸ್ಟಿಂಗ್ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್  ಗೆ ಸೂಕ್ತ ಕ್ರಮ ವಹಿಸಲು ನೆರೆದಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಕೃಷ್ಣರಾಜ ಕ್ಷೇತ್ರವನ್ನು ಕೋವಿಡ್-19 ನಿಂದ ಶೂನ್ಯ ಸಾವಿನ ಕ್ಷೇತ್ರವನ್ನಾಗಿಸಲು  ಇದುವರೆಗೂ  ಪಾಸಿಟಿವ್ ಬಂದಿರುವ ಕೇಸ್ ಗಳ ಹಿನ್ನಲೆ ಪರೀಶೀಲಿಸಿ ಅದರ ಅನುಗುಣವಾಗಿ ಸೂಕ್ತ ಕ್ರಮಕೈಗೊಳ್ಳಲು  ತೀರ್ಮಾನಿಸಲಾಯಿತು.

ಜಿಲ್ಲಾಪಂಚಾಯತ್ ಆವರಣದಲ್ಲಿ ನಡೆದ ಸಮೀಕ್ಷೆ ಸಭೆಯಲ್ಲಿ ಶಾಸಕರು, ಜಿಲ್ಲಾಧೀಕಾರಿಗಳು, ನಗರಪಾಲಿಕೆ ಆಯುಕ್ತರು, ಕೃಷ್ಣರಾಜ ಕ್ಷೇತ್ರಕ್ಕೆ ಸಂಬಂಧಿಸಿದ ನಗರಪಾಲಿಕೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ತಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: