ಮೈಸೂರು

ಸಿಎಂ ಇಬ್ರಾಹಿಂ ಭಾಷಣಕ್ಕೆ ನಗೆಗಡಲಲ್ಲಿ ತೇಲಿದ ಸಭಿಕರು

ಚತುರ ಮಾತುಗಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ, ಸಿಎಂ ಇಬ್ರಾಹಿಂ ಕಾರ್ಯಕ್ರಮದಲ್ಲಿದ್ದರೆ, ಆ ಕಾರ್ಯಕ್ರಮಕ್ಕೆ ಹೊಸ ಹೊಳಪು, ಹಾಸ್ಯವೇ ಮೇಲುಗೈ, ಸಭಿಕರನ್ನು ಹಿಡಿದಿಡಲು ಅವರ ಮಾತುಗಳ ಹಾಸ್ಯಬಾಣವೇ ಸಾಕು ಇದಕ್ಕೆ ಸಾಕ್ಷಿಯಾಗಿದ್ದು ದೊಡ್ಡಕವಲಂದೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ.

ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನ ಗಣ್ಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಶುಕ್ರವಾರ ಬಿರು ಬಿಸಿಲನ್ನು ಲೆಕ್ಕಿಸದೆ, ಕುರ್ಚಿಯಿಂದ ಕದಲದಂತೆ ಸಭಿಕರು ಹಿಡಿದಿಟ್ಟಿದ್ದು ಸಿಎಂ ಇಬ್ರಾಹಿಂ ಅವರ ಹಾಸ್ಯ ಮಿಶ್ರಿತ ಚುಟುಕು ಹಾಗೂ ವಚನ ಸಾಲುಗಳ ಉಲ್ಲೇಖದ ಮಾತುಗಳು.

ಸಹಜವಾಗಿ ವಚನಗಳನ್ನು ಉಲ್ಲೇಖಿಸುತ್ತಲೇ ಮಾತನ್ನು ಆರಂಭಿಸಿದ ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್‍’ ಅನ್ನು ತಮ್ಮ ಶೈಲಿಯಲ್ಲಿ ಟೀಕಿಸಿ  ಮನ್‍ ಕಿ ಬದಲಾಗಿ ಜನ್‍‍ ಕಿ ಬಾತ್ ಬೇಕು ಎಂದು ಪ್ರಧಾನಿಯವರ ಕಾರ್ಯವೈಖರಿ ಹಾಗೂ ಬಿಜೆಪಿ ಮುಖಂಡರನ್ನು ತಮ್ಮದೇ ಧಾಟಿಯಲ್ಲಿ  ಸುಮಾರು ಒಂದೂವರೆ ಗಂಟೆಗಳ ಕಾಲ ಟೀಕಿಸುತ್ತಾ ಸಭಿಕರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸಿ ಬಿರು ಬಿಸಿಲಿನಿಂದ ಸುಸ್ತಾಗಿದ್ದವರಿಗೆ ನಗೆಯ ಟಾನಿಕ್ ನೀಡಿದರು.

ಸಚಿವ ಸ್ಥಾನ ಹೋಗಿದ್ದಕ್ಕೆ ಮುನಿಸಿಕೊಂಡು ಪಕ್ಷಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ನಡೆಯುವಂತೆ ಮಾಡಿರುವ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಅವರ ಕಾರ್ಯವೈಖರಿಯನ್ನು ಟೀಕಿಸಿ, ನಾನೇನು ಸಚಿವನಲ್ಲ ಆದರೂ ಪಕ್ಷದ ಹಾಗೂ ವ್ಯಕ್ತಿ ನಿಷ್ಠೆಯ ಕಾರ್ಯಕರ್ತನೆಂದು ತಮ್ಮನ್ನೇ ಸಮರ್ಥಿಸಿಕೊಂಡು ನಿರರ್ಗಳವಾಗಿ ಕನ್ನಡ ಮತ್ತು ಉರ್ದುವಿನಲ್ಲಿ ಮಾತನಾಡಿ ಶಾಹಿರಿಗಳನ್ನು ಹೇಳಿ ಸಭಿಕರನ್ನು ಹಿಡಿದಿಟ್ಟರು. (ಕೆ.ಎಂ.ಆರ್)

Leave a Reply

comments

Related Articles

error: