ಮೈಸೂರು

ಮೃತಪಟ್ಟ ಮಹಿಳೆಯ ಸರ ಕಳ್ಳತನ ಮಾಡಿರುವ ಆರೋಪ : ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

ಮೈಸೂರು,ಆ.18:-  ಮೈಸೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಸರ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ.

ಆಗಸ್ಟ್ 13 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೃತ ಮಹಿಳೆ ಜಯಲಕ್ಷ್ಮಿ ಎಂಬವರ ಸರ ಕಳ್ಳತನ ಮಾಡಲಾಗಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮೈಸೂರಿನ ವಿದ್ಯಾ ನಗರದ ನಿವಾಸಿ ಜಯಲಕ್ಷ್ಮಿ ಅವರನ್ನು ಕುಟುಂಬಸ್ಥರು ಮೈಸೂರಿನ ಹಲವು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ  ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂದು ಹೇಳಿ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಜಯಲಕ್ಷ್ಮಿ ಅವರನ್ನು ಮೇಟಗಳ್ಳಿ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆಸ್ಪತ್ರೆಗೆ ದಾಖಲಿಸಿದ ಕೆಲ ಸಮಯದಲ್ಲೇ ಜಯಲಕ್ಷ್ಮಿ ಮೃತಪಟ್ಟಿದ್ದರು. ನಂತರ ಮೃತ ಮಹಿಳೆಗೆ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಕೊರೋನಾ ಟೆಸ್ಟ್ ನಂತರ ಮೃತದೇಹವನ್ನು  ವಾಪಸ್ಸು ನೀಡಲಾಗಿತ್ತು. ಈ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ 26 ಗ್ರಾಂ ಚಿನ್ನದ ಸರ ಕಳುವು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಕೋವಿಡ್-19 ಆಸ್ಪತ್ರೆಯ ಮುಖ್ಯಸ್ಥರಿಗೆ ಜಯಲಕ್ಷ್ಮಿ ಪುತ್ರ ರವೀಶ್ ದೂರು ನೀಡಿದ್ದಾರೆ. ಸದ್ಯ ರವೀಶ್ ಹಾಗೂ ಅವರ ಕುಟುಂಬದ 5 ಸದಸ್ಯರಿಗೂ ಪಾಸಿಟಿವ್ ಬಂದಿದ್ದು ಅವರನ್ನು ಕೋವಿಡ್ -19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಸಾಧ್ಯವಾಗಿಲ್ಲ. ಈ ಸಂಬಂಧ ಮೇಟಗಳ್ಳಿ ಪೊಲೀಸರಿಗೆ ಪುತ್ರ ರವೀಶ್ ವಿಷಯ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: