ಪ್ರಮುಖ ಸುದ್ದಿಮೈಸೂರು

ಇಂದು ವಿಶ್ವ ಛಾಯಾಗ್ರಹಣ ದಿನ : ಪ್ರಪಂಚದಲ್ಲಿನ ವಿವಿಧ ಸೌಂದರ್ಯವನ್ನು ತಮ್ಮ ಕಲೆಯೊಂದಿಗೆ ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಗ್ರಾಹಕರಿಗೆ ಸಮರ್ಪಣೆ

ಮೈಸೂರು,ಆ.19:- ಇಂದು ವಿಶ್ವಾದ್ಯಂತ ಅಂತರ್ಜಾಲಗಳದ್ದೇ ಕಾರು ಬಾರು. ನೆಟ್ ವರ್ಕ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅಂತರ್ಜಾಲದ ಕಾರಣದಿಂದಾಗಿ ಇಂದು ಪ್ರತಿಯೊಂದು ಮೂಲೆಯಲ್ಲಿಯೂ ಫೊಟೋಗ್ರಫಿ ತನ್ನದೇ ಛಾಪು ಮೂಡಿಸಿದೆ. ಫೇಸ್ಬುಕ್ನಿಂದ ಮೊದಲ್ಗೊಂಡು ಟ್ವಿಟರ್ ವರೆಗೆ ಇಂದು ಎಲ್ಲಾ ಸಾಮಾಜಿಕ ವೇದಿಕೆಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತದೆ.
ಇಂದು ವಿಶ್ವ ಛಾಯಾಯಾಗ್ರಹಣ ದಿನ . ಪ್ರಪಂಚದಾದ್ಯಂತದ ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಲ್ಲಿನ ವಿವಿಧ ಸೌಂದರ್ಯವನ್ನು ತಮ್ಮ ಕಲೆಯೊಂದಿಗೆ ಕ್ಯಾಮೆರಾದಲ್ಲಿ ಸೆರೆಹಿಡಿದ ಎಲ್ಲ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಸಮರ್ಪಿಸಲಾಗಿದೆ.

ಛಾಯಾಗ್ರಹಣ ಹುಟ್ಟಿದ್ದು ಹೇಗೆ?

ಇಂದು ಛಾಯಾಗ್ರಹಣದ ಮೂಲಕ ನಾವು ನಮ್ಮ ಜೀವನದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸುಲಭವಾಗಿ ಸೆರೆಹಿಡಿಯುತ್ತೇವೆ.
ಇತಿಹಾಸಕಾರರ ಪ್ರಕಾರ 180 ವರ್ಷಗಳ ಹಿಂದೆ ಜನವರಿ 9, 1839 ರಂದು ಛಾಯಾಗ್ರಹಣ ಪ್ರಾರಂಭವಾಯಿತು. ಡಾಗೊರೊಟೈಪ್ ಪ್ರಕ್ರಿಯೆಯನ್ನು 9 ಜನವರಿ 1839 ರಂದು ಫ್ರೆಂಚ್ ವಿಜ್ಞಾನಿಗಳಾದ ಜೋಸೆಫ್ ನಿಕ್ಫೋರ್ ಮತ್ತು ಲೂಯಿಸ್ ಡಾಗ್ಯೂರೆ ಕಂಡುಹಿಡಿದರು. ಡಾಗೊರೊಟೈಪ್ ತಾಂತ್ರಿಕ ಛಾಯಾಗ್ರಹಣದ ಮೊದಲ ಪ್ರಕ್ರಿಯೆಯಾಗಿದೆ. ಅವರ ಆವಿಷ್ಕಾರವನ್ನು ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರ ಜಗತ್ತಿಗೆ ಪರಿಚಯಿಸಿತು. ಇದರ ನೆನಪಿಗಾಗಿ ವಿಶ್ವ ಛಾಯಾಗ್ರಹಣ ದಿನವನ್ನು ಆಗಸ್ಟ್ 19 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಛಾಯಾಗ್ರಹಣದ ಜನಪ್ರಿಯತೆಯು 2010 ರಿಂದ ಹೆಚ್ಚಾಗಲು ಪ್ರಾರಂಭಿಸಿದೆ.

2010 ರಲ್ಲಿ, ಆಸ್ಟ್ರೇಲಿಯಾದ ಛಾಯಾಗ್ರಾಹಕರೋರ್ವರು ಈ ದಿನದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರಾರಂಭಿಸಿದರು. ತನ್ನ ಎಲ್ಲ ಸಹೋದ್ಯೋಗಿಗಳ ಸಹಾಯದಿಂದ ಅವರು ಈ ದಿನವನ್ನು ಪ್ರಪಂಚದಾದ್ಯಂತ ಪರಿಚಯಿಸಿದರು. ಅವರು ತಮ್ಮ 270 ಸಹ ಛಾಯಾಗ್ರಾಹಕರೊಂದಿಗೆ ಆನ್ಲೈನ್ ಗ್ಯಾಲರಿಯ ಮೂಲಕ ತಮ್ಮ ಫೋಟೋಗಳನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿದರು. ಈ ಆನ್ಲೈನ್ ಗ್ಯಾಲರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು, ನಂತರ ಇದೇ ಒಂದು ಪ್ರವೃತ್ತಿಯಾಗಿ ಮಾರ್ಪಟ್ಟಿತ್ತು. ಪ್ರತಿವರ್ಷ ಛಾಯಾಗ್ರಹಣ ದಿನದಂದು ಇದೇ ರೀತಿಯ ಆನ್ಲೈನ್ ಗ್ಯಾಲರಿ ರೂಪುಗೊಳ್ಳುತ್ತಿತ್ತು.
ತಂತ್ರಜ್ಞಾನಗಳು ಅಭಿವೃದ್ಧಿಗೊಂಡಂತೆ ಕ್ಯಾಮರಾ ಕೂಡ ವಿವಿಧ ರೀತಿಯಲ್ಲಿ ರೂಪುಗೊಂಡಿತು. ಸಿಸಿಟಿವಿ ಕ್ಯಾಮರಾ, ಡಾರ್ಕ್ ಫೈಟರ್ ಟೆಕ್ನಾಲಜಿ ಕ್ಯಾಮರಾ, ಎಎನ್ ಪಿಆರ್/ಎಲ್ ಪಿಆರ್ ಕ್ಯಾಮರಾ, ಇಂಟರ್ ನಲ್ & ಎಕ್ಸಟರನಲ್ ಡೋಮ್ ಕ್ಯಾಮರಾ, ಬುಲೆಟ್ ಕ್ಯಾಮರಾ, ಸಿ-ಮೌಂಟ್ ಕ್ಯಾಮರಾ, ಡೇ/ನೈಟ್ ಕ್ಯಾಮರಾ, ಪಿಟಿಝಡ್ ಪಾನ್ ಟಿಲ್ಟ್ &ಝೂಮ್ ಕ್ಯಾಮರಾ, ಡಿಸ್ಕ್ರೀಟ್ ಸಿಸಿಟಿವಿ, ಥರ್ಮಲ್ ಇಮೇಜ್ ಕ್ಯಾಮರಾ/ಇನ್ ಫ್ರಾರೆಡ್ ಕ್ಯಾಮರಾಗಳು ಸೇರಿದಂತೆ ಹಲವು ವಿಧಗಳಿವೆ.
ನಿಕಾನ್, ಕೆನಾನ್, ಒಲಂಪಸ್, ಸೋನಿ, ಯಶಿಕಾ ಸೇರಿದಂತೆ ಹಲವಾರು ಕಂಪನಿಗಳಿದ್ದು ನಿಕಾನ್, ಕೆನಾನ್, ಒಲಂಪಸ್ ಗಳು  ಇಂದು ಹೆಚ್ಚು ಗುರುತಿಸಿಕೊಂಡಿದೆ. ಇಂದು ಪ್ರತಿಯೊಂದು ಮೊಬೈಲ್ ಗಳಲ್ಲಿಯೂ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದ್ದು, ಯುವಜನತೆಯಲ್ಲಿ ಫೋಟೋ ಕ್ರೇಜ್ ಹೆಚ್ಚುತ್ತಿದೆ. ಎಲ್ಲಿ ಹೋದರೂ ಅಲ್ಲೊಂದು ಕ್ಲಿಕ್ ಮಾಡುವುದು ಇಂದಿನ ಯುವಜನತೆಯ ಹವ್ಯಾಸವಾಗಿಬಿಟ್ಟಿದೆ. ಅದರಲ್ಲೂ ಸೆಲ್ಫಿಗೆ ಮುಗಿ ಬೀಳುವುದೇ ಹೆಚ್ಚು.  ಜಿಮ್ಮಿ ನೆಲ್ಸನ್, ರೆಹಾಹ್ನ, ಲೀ ಜೆಫ್ಫರೀಸ್, ಜೋ ಮೆಕ್ನಲಿ, ಎರಿಕ್ ಅಲ್ಮಾಸ್, ಮರಿಯೋ ಟೆಸ್ಟಿನೋ, ಸ್ಟೀವ್ ಮಕ್ಯೂರಿ, ಟಿಮೊಥಿ ಹಾಗನ್ ಸೇರಿದಂತೆ ಹಲವು ಛಾಯಾಗ್ರಾಹಕರು ವಿಶ್ವದಲ್ಲಿಯೇ ಟಾಪ್ 20 ರಲ್ಲಿ ಗುರುತಿಸಿಕೊಂಡಿದ್ದರು.
ಭಾರತದಲ್ಲಿ ನವದೆಹಲಿಯ ರಘು ರಾಯ್, ಮುಂಬೈ ನ ಡಬ್ಬೋ ರತ್ನಾನಿ, ಅತುಲ್ ಕಸ್ಬೇಕರ್, ದಯನಿತಾ ಸಿಂಗ್, ಸೂನಿ ತರಪೂರೆವಾಲಾ, ರಥಿಕಾ ರಾಮಸ್ವಾಮಿ, ಅರ್ಜುನ್ ಮಾರ್ಕ್, ಪ್ರಬುದ್ಧ ದಾಸಗುಪ್ತಾ, ಗೌತಮ್ ರಾಜಾಧ್ಯಕ್ಷ, ಕರ್ನಾಟಕದ ಸುಧೀರ್ ಶಿವರಾಮ್ ಟಾಪ್ 10ರಲ್ಲಿ ಗುರುತಿಸಿಕೊಂಡಿದ್ದಾರೆ.

ಇಂದು ವಿಶ್ವ ಛಾಯಾಗ್ರಹಣ ದಿನ.   ಸಿಟಿಟುಡೇ ಛಾಯಾಗ್ರಾಹಕ ಜಿ.ಕೆ.ಹೆಗಡೆ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ. (ಎಸ್.ಎಚ್)

Leave a Reply

comments

Related Articles

error: