ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಗಲಭೆ ಪ್ರಕರಣ: ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ವಿಚಾರಣೆ

ಬೆಂಗಳೂರು,ಆ.19-ನಗರದ ಡಿ.ಜೆ.ಹಳ್ಳಿ. ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್, ಡಿ.ಜೆ.ಹಳ್ಳಿ ಕಾರ್ಪೊರೇಟರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸಂಪತ್ ರಾಜ್ ಅವರೊಂದಿಗೆ ಪುಲಿಕೇಶಿ ನಗರದ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದಲ್ಲಿ ಸಂಪತ್ ರಾಜ್ ಹಾಗೂ ಅಬ್ದುಲ್ ರಕೀಬ್ ಜಾಕೀರ್ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದರಂತೆ ನಿನ್ನೆ ಇವರಿಬ್ಬರು ವಿಚಾರಣೆಗೆ ಹಾಜರಾಗಿದ್ದಾರೆ. ಇಬ್ಬರನ್ನೂ 4 ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಇಬ್ಬರೂ ಕಾರ್ಪೊರೇಟರ್ ಗಳು ಗಲಭೆ ಪ್ರಕರಣ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿರುವ ಗಲಭೆಕೋರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ.

ವಿಚಾರಣೆಗೊಳಪಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರೂ ನಾಯಕರೂ, ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇವೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ನವೀನ್ ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ನವೀನ್ ನನ್ನು ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. (ಎಂ.ಎನ್)

 

Leave a Reply

comments

Related Articles

error: