ಮೈಸೂರು

ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿಯವರನ್ನು ಮರುನೇಮಕ ಮಾಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯ

ಮೈಸೂರು,ಆ.19:- ನ್ಯಾಯಾಲಯದ ಆದೇಶದಂತೆ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿಯವರನ್ನು ಮರುನೇಮಕ ಮಾಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ ಎಸ್.ಮೂರ್ತಿಯವರು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ  ರಿಟ್ ಪಿಟಿಷನ್ ಸಂಖ್ಯೆ  537/2019 ರಲ್ಲಿ ಪ್ರಶ್ನಿಸಲಾಗಿ ವಿಚಾರಣೆ ಕೈಗೊಂಡ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿಯವರು ಎಸ್.ಮೂರ್ತಿಯವರನ್ನು ಮೂರು ವಾರಗಳ ಒಳಗಾಗಿ ವಿಧಾನಸಭಾ ಕಾರ್ಯದರ್ಶಿ ಹುದ್ದೆಗೆ ಮರು ನೇಮಕ ಮಾಡುವಂತೆ 2/7/2020ರಂದು ಆದೇಶ ಹೊರಡಿಸಿರುತ್ತಾರೆ. ಆದರೆ ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿದ ಎಸ್.ಮೂರ್ತಿ ಅವರನ್ನು ಸರ್ಕಾರದ ಪ್ರಮುಖ ಹುದ್ದೆಯಿಂದ ಹೊರಗಿಟ್ಟು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿಶಾಲಾಕ್ಷಿಯವರನ್ನು ಪ್ರಭಾರ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸುವ ಉದ್ದೇಶದಿಂದ ನ್ಯಾಯಾಲಯದ ಆದೇಶವನ್ನು ಪಾಲಿಸದೆ ನ್ಯಾಯಾಲಯದ ತೀರ್ಪನ್ನೇ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವ ಸರ್ಕಾರದ ದಲಿತ ವಿರೋಧಿ ನೀತಿಯನ್ನು  ಖಂಡಿಸುತ್ತೇವೆ ಎಂದರು.

ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(6)ರಲ್ಲಿರುವಂತೆ ಸರ್ಕಾರದ ಅನುಮತಿ ಇಲ್ಲದೆ ಅಮಾನತುಗೊಂಡ ಅವಧಿಯನ್ನು 6ತಿಂಗಳು ಮೀರಬಾರದು. ಆದರೆ ಎಸ್.ಮೂರ್ತಿಯವರು ಅಮಾನತುಗೊಂಡು 20ತಿಂಗಳೇ ಕಳೆದರು ಸಹ ನಿಯಮಾನುಸಾರವಾಗಿ ಮರುನೇಮಕ ಮಾಡದೆ ಆರು ತಿಂಗಳ ಕಾಲ ಶೇ.50ರಷ್ಟು ಮತ್ತು 6ತಿಂಗಳ ನಂತರ ಶೇ.75ರಷ್ಟು ಜೀವನಾಧಾರ ಭತ್ಯೆಯನ್ನು ನೀಡದೆ ವಿಚಾರಣೆಯನ್ನು ಪೂರ್ಣಗೊಳಿಸದೇ ಎಸ್.ಮೂರ್ತಿಯವರಿಗೆ ಮಾನಸಿಕ ಕಿರುಕುಳ ನೀಡಿ ಸರ್ಕಾರ ವಂಚಿಸಿದೆ ಎಂದು ಆರೋಪಿಸಿದರು.

ಈಗಲಾದರೂ ಸರ್ಕಾರ ನ್ಯಾಯಾಲಯದ ಆದೇಶದಂತೆ ಎಸ್.ಮೂರ್ತಿಯವರು ಸಂವಿಧಾನಬದ್ಧವಾಗಿ ಗಳಿಸಿಕೊಂಡಿರುವ ಕಾರ್ಯದರ್ಶಿ ಹುದ್ದೆಗೆ ಮರುನೇಮಕ ಮಾಡಬೇಕೆಂದು ದಸಂಸ ಮೈಸೂರು ಶಾಖೆ ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತದೆ. ತಪ್ಪಿದಲ್ಲಿ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: