ಪ್ರಮುಖ ಸುದ್ದಿಮೈಸೂರು

ಕೆಲಸ ಮಾಡದೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಿ : ಬಿ.ಎಸ್.ಯಡಿಯೂರಪ್ಪ

ಏನೂ ಕೆಲಸ ಮಾಡದೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್‍ನವರಿಗೆ ಮತದಾರರು ತಕ್ಕ ಪಾಠ ಕಲಿಸುವ ಅವಕಾಶ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಿಂದ ಒದಗಿಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಂಜನಗೂಡು ಬಳಿಯ ಕತ್ವಾಡಿಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ರೋಡ್ ಶೋ ನಡೆಸಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಶ್ರೀನಿವಾಸ ಪ್ರಸಾದ್ ಅವರ ಪರ ಮತಯಾಚನೆ ಮಾಡಿದ ಅವರು ಮತದಾರರನ್ನುದ್ದೇಶಿಸಿ ಮಾತನಾಡಿದರು. ದಲಿತ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಅವರಂಥ ಮಹಾ ವ್ಯಕ್ತಿಗಳಿಗೆ ರಾಜಕೀಯವಾಗಿ ಉನ್ನತ ಸ್ಥಾನಮಾನಗಳು ಸಿಗದಂತೆ ಮಾಡಿದವರು ಕಾಂಗ್ರೆಸ್‍ನವರು. ಆದರೆ ಇಂದು ಅವರು ದಲಿತ ಸಮುದಾಯಗಳ ಅಭಿವೃದ್ಧಿಗೆ ಏನೇನೋ ಮಾಡಿಬಿಟ್ಟಿದ್ದೇವೆ ಎಂದು ಎಲ್ಲೆಡೆ ಹೇಳಿಕೊಂಡು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ನೀಡಿದ್ದ ಕೋಟಿಗಟ್ಟಲೆ ಅನುದಾನವನ್ನು ಸದ್ಬಳಕೆ ಮಾಡದೆ ಅದು ಹಿಂದಕ್ಕೆ ಹೋಗುವಂತೆ ಮಾಡಿರುವುದೇ ಕಾಂಗ್ರೆಸ್‍ನವರು ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯಗಳಿಗೆ ಒಂದು ಪ್ರಮುಖ ಉದಾಹರಣೆ ಆಗಬಲ್ಲದು ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಾವು ಹಿಂದುಳಿದ ವರ್ಗಗಳ ಅಭಿವೃದ್ಧಿಯ ರೂವಾರಿ ಎಂದು ಹೇಳಿಕೊಳ್ಳುತ್ತಲೇ ಆ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಓರ್ವ ಪ್ರಾಮಾಣಿಕ ಮತ್ತು ಅನುಭವಿ ನಾಯಕರಾಗಿದ್ದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕಡೆಗಣಿಸಿ ಸಚಿವ ಸಂಪುಟದಿಂದ ಹೊರ ಹಾಕುವ ಮೂಲಕ ಮತ್ತೊಮ್ಮೆ ತಾವು ದಲಿತ ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ಮತದಾರರು ಮುಂದಾಗಬೇಕು ಎಂದು ಕರೆ ನೀಡಿದರು.
ಇಂದು ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನಭಾಗ್ಯ ಯೋಜನೆ ಸಿದ್ಧರಾಮಯ್ಯ ಅವರದ್ದಲ್ಲ. ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು. ನರೇಂದ್ರ ಮೋದಿ ಅವರು ಒಂದು ಕೆಜಿ ಅಕ್ಕಿಯನ್ನು 32 ರೂ.ಗಳಂತೆ ಮತ್ತು ಒಂದು ಕೆಜಿ ಗೋಧಿಯನ್ನು 22 ರೂ.ಗಳಂತೆ ಖರೀದಿಸಿ ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ಅದನ್ನು ಸಿದ್ಧರಾಮಯ್ಯ ಅಕ್ಕಿಗೆ 3 ರೂ. ಗೋಧಿಗೆ 2 ರೂ.ಗಳಂತೆ ಜನರಿಗೆ ಹಂಚಿ ತಾವೇ ಅನ್ನಭಾಗ್ಯ ಯೋಜನೆಯ ರೂವಾರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ 325 ಸ್ಥಾನಗಳನ್ನು ಗೆದ್ದಿದ್ದು ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಪಡೆದಿದೆ. ಬಿಜೆಪಿಯಿಂದ ಗೆದ್ದಿರುವವರಲ್ಲಿ 75 ಮಂದಿ ದಲಿತ ಶಾಸಕರಿದ್ದಾರೆ. ಹೀಗಿದ್ದರೂ ಸಹ ಬಿಜೆಪಿಯವರು ದಲಿತ ವಿರೋಧಿಗಳು ಎಂದು ಕಾಂಗ್ರೆಸ್‍ನವರು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಮಕ್ಕಳಿಗೆ ಹಾಲು, ಮೊಟ್ಟೆ ಕೊಡುತ್ತಿದ್ದೇವೆ ಎಂದು ಕಾಂಗ್ರೆಸ್‍ನವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಂಥ ಯೋಜನೆಗಳನ್ನು ನಮ್ಮ ಸರ್ಕಾರ ಕೂಡ ಜಾರಿಗೆ ತಂದಿತ್ತು ಎಂಬುದನ್ನು ಜನ ಮರೆತಿಲ್ಲ ಎಂದ ಅವರು, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸನ್ನು ರಾಜ್ಯದಿಂದ ಉಚ್ಛಾಟನೆ ಮಾಡಲು ಮತದಾರರು ಬಿಜೆಪಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯೆ, ಚಿತ್ರನಟಿ ತಾರಾ ಸೇರಿದಂತೆ ಬಿಜೆಪಿ ಮುಖಂಡರು ಯಡಿಯೂರಪ್ಪನವರ ಜೊತೆ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: