ಮೈಸೂರು

ಚುನಾವಣೆಯಲ್ಲಿ ಮತ ಖಾತ್ರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಯಂತ್ರ ಬಳಕೆ : ಡಿ.ರಂದೀಪ್

ನಂಜನಗೂಡು ಉಪಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಎಲ್ಲಾ 236 ಬೂತ್‍ಗಳಲ್ಲೂ ಮತದಾರ ತನ್ನ ಮತವನ್ನು ಖಾತ್ರಿ ಪಡಿಸಿಕೊಳ್ಳುವ ವಿವಿಪ್ಯಾಟ್ (ವೋಟರ್ ವೇರಿಫಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರವನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಂದೀಪ್.ಡಿ ತಿಳಿಸಿದರು.

ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಮತಗಳು ಅದಲು ಬದಲಾಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಅದನ್ನು ಹೋಗಲಾಡಿಸುವ ಸಲುವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ವೇಳೆ ಇವಿಎಂ ಮತದಾನ ಯಂತ್ರದೊಂದಿಗೆ ವಿವಿಪ್ಯಾಟ್ ಯಂತ್ರವನ್ನೂ ಸಹ ಬಳಸಲಾಗುತ್ತಿದೆ. ಮತದಾರ ತನ್ನ ಹಕ್ಕು ಚಲಾವಣೆ ಮಾಡಿದ ಬಳಿಕ ತಮ್ಮ ಮತವನ್ನು ಖಾತ್ರಿ ಪಡಿಸಿಕೊಳ್ಳಬಹುದು. ವಿವಿಪ್ಯಾಟ್ ಯಂತ್ರದಲ್ಲಿನ ಗ್ಲಾಸ್ ಡಿಸ್‍ಪ್ಲೇನಲ್ಲಿ ಯಾರಿಗೆ ಮತದಾನ ಮಾಡಿದ್ದಾರೆ ಎಂಬುದು 7ಸೆಕೆಂಡ್‍ವರೆಗೂ ಕಾಣಲಿದೆ. ಬಳಿಕ ಮತದಾನ ಚೀಟಿ ಜನರೇಟ್ ಆಗಿ ಯಂತ್ರದೊಳಗೆ ಬೀಳಲಿದೆ. ಮತದಾನದ ಗೌಪ್ಯತೆಯ ಕಾರಣದಿಂದಾಗಿ ಚೀಟಿಯನ್ನು ನೋಡಬಹುದು. ಅದನ್ನು ಕೊಂಡೊಯ್ಯವ ಹಾಗಿಲ್ಲ. ಅನಂತರ ಬೀಪ್ ಸೌಂಡ್ ಕೇಳುತ್ತದೆ. ಇದರ ಬಳಕೆ ಸುಲಭವಾಗಿದ್ದು ಮತದಾರರು ಯಾವುದೇ ಗೊಂದಲ ಮಾಡಿಕೊಳ್ಳದೆ ಮತದಾನ ಮಾಡಬಹುದು ಎಂದು ಹೇಳಿದರು.

ಮೊದಲ ಹಂತದಲ್ಲಿ ಈಗಾಗಲೇ ಸುಮಾರು 355 ಇವಿಎಂ ಯಂತ್ರಗಳನ್ನು ಪರಿಶೀಲನೆ ಮಾಡಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು, ಮುಖಂಡರು, ಚುನಾವಣಾ ವೀಕ್ಷಕರು, ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳಿಗೆ ಹಾಗೂ ಮತದಾರರಿಗೆ ಅರಿವು ಮೂಡಿಸುವ ಸಲುವಾಗಿ ಸುಮಾರು 15 ವಿವಿಪ್ಯಾಟ್ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಹಿಂದೆ ಮತದಾನದ ವೇಳೆ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಮಾತ್ರ ಇರುತ್ತಿತ್ತು. ಈ ಬಾರಿಯ ಉಪಚುನಾವಣೆಯಲ್ಲಿ ವಿವಿಪ್ಯಾಟ್ ಹಾಗೂ ವಿಎಸ್‍ಡಿಯು (ವೋಟರ್ ಸ್ಟೇಟಸ್ ಡಿಸ್‍ಪ್ಲೇ ಯೂನಿಟ್) ಸಹ ಇರಲಿದೆ. ವಿವಿಪ್ಯಾಟ್ ಯಂತ್ರದಲ್ಲಿ ಸುಮಾರು 1500 ಮತಗಳನ್ನು ಚಲಾವಣೆ ಮಾಡಬಹುದಾಗಿದ್ದು, ಮೊದಲ ಮತ ಚಲಾವಣೆಗೆ ಮತದಾನದ ಚೀಟಿಯೊಂದಿಗೆ ಅಧಿಕ 6 ಚೀಟಿಗಳು ಜನರೇಟ್ ಆಗುತ್ತವೆ. ಹೆಚ್ಚುವರಿ 6 ಚೀಟಿಗಳು ವಿವಿಪ್ಯಾಟ್ ಯಂತ್ರದ ಸ್ಥಿತಿ, ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡ ಮಾಹಿತಿಯನ್ನು ನೀಡುತ್ತವೆ. ವಿವಿಪ್ಯಾಟ್ ಯಂತ್ರ ಪರಿಪೂರ್ಣವಾಗಿದ್ದು ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡುವುದಿಲ್ಲ. ಒಂದು ವೇಳೆ ಮತದಾರ ಮತದಾನದ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಅಂಥವರ ವಿರುದ್ಧ ಎಫ್‍ಐಆರ್ ದಾಖಲಿಸಿ 3ತಿಂಗಳು ಜೈಲು ಶಿಕ್ಷೆ ಸಹ ನೀಡಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಚುನಾವಣಾ ವೀಕ್ಷಕ ಪಂಕಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: