ಕ್ರೀಡೆದೇಶಪ್ರಮುಖ ಸುದ್ದಿ

ನಿಮ್ಮ ತಾಳ್ಮೆ ಯುವಜನತೆಗೆ ಅದ್ಭುತ ಪಾಠ: ಎಂ.ಎಸ್.ಧೋನಿಗೆ ಎರಡು ಪುಟಗಳ ಪತ್ರ ಬರೆದ ಪ್ರಧಾನಿ ಮೋದಿ

ನವದೆಹಲಿ,ಆ.20-ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿ ಪತ್ರವೊಂದನ್ನು ಬರೆದಿದ್ದಾರೆ.

ಪ್ರಧಾನಿ ಬರೆದಿರುವ ಸುದೀರ್ಘ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್‌ ಧೋನಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡು ಮೋದಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಧೋನಿಗೆ ಮೋದಿ ಬರೆದಿರುವ ಪತ್ರ ಇದೀಗ ಸಖತ್ ವೈರಲ್ ಆಗಿದೆ.

ಧೋನಿ ಅವರ ಕ್ರಿಕೆಟ್ ರಂಗದ ಸಾಧನೆ ಹಾಗೂ ಭಾರತ ಮತ್ತು ವಿಶ್ವದ ಕ್ರೀಡೆಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಮೋದಿ ನಿನ್ನೆ ಧೋನಿಗೆ ಪತ್ರ ಬರೆದಿದ್ದಾರೆ. ಮೋದಿ ಅವರು ತಮ್ಮ ಪತ್ರದ ಪ್ರಾರಂಭದಲ್ಲಿ `ಡಿಯರ್​..ಮಹೇಂದ್ರ…’ ಎಂದು ಉಲ್ಲೇಖಿಸಿರುವುದು ತೀರ ವಿಶೇಷವೆನ್ನಿಸುತ್ತದೆ.

ಎಂದಿನ ನಿರ್ಭೀತ ಶೈಲಿಯಲ್ಲಿ ನೀವು ಪೋಸ್ಟ್‌ ಮಾಡಿದ ಅದೊಂದು ವಿಡಿಯೋ ಇಡೀ ರಾಷ್ಟ್ರವನ್ನೇ ಭಾವುಕ ಚರ್ಚಾ ಕೇಂದ್ರವನ್ನಾಗಿಸಲು ಕಾರಣವಾಯಿತು. ದೇಶದ 130 ಕೋಟಿ ಜನರೂ ಅಂದು ನಿರಾಶೆಗೊಳಗಾದರು. ಅದರೂ, ಕ್ರಿಕೆಟ್‌ ರಂಗಕ್ಕೆ ನೀವು ನೀಡಿದ ಎಲ್ಲದಕ್ಕಾಗಿ ಜನ ಶಾಶ್ವತವಾಗಿ ಕೃತಜ್ಞರಾಗಿರುತ್ತಾರೆ ಎಂದಿದ್ದಾರೆ.

ನರೇಂದ್ರ ಮೋದಿಯವರು ತಮ್ಮ ಪತ್ರದಲ್ಲಿ ಧೋನಿಯವರನ್ನು ಮನಸ್ಫೂರ್ತಿ ಹೊಗಳಿದ್ದಾರೆ. ನಿಮ್ಮ ಹೇರ್​ಸ್ಟೈಲ್​ ಹೇಗಿತ್ತು ಎಂಬುದು ಮುಖ್ಯವಲ್ಲ..ಆದರೆ ಸೋಲು ಮತ್ತು ಗೆಲುವು ಎರಡೂ ಸಂದರ್ಭದಲ್ಲಿ ನೀವು ಅದೇ ಶಾಂತರೀತಿಯಲ್ಲಿ ಇರುತ್ತಿದ್ದಿರಲ್ಲ..ಆ ನಿಮ್ಮ ತಾಳ್ಮೆ ಯುವಜನತೆಗೆ ಅದ್ಭುತ ಪಾಠ ಎಂದು ಹೇಳಿದ್ದಾರೆ. ಹಾಗೇ, ಭಾರತೀಯ ಸೇನೆ ಬಗ್ಗೆ ನಿಮಗೆ ಇರುವ ಪ್ರೀತಿ, ಗೌರವ ನೋಡಿ ನನಗೆ ತುಂಬ ಖುಷಿಯಾಗಿದೆ. ಸೇನಾ ಸಿಬ್ಬಂದಿಯ ಒಳಿತಿಗಾಗಿ ಯೋಚಿಸುವ ನಿಮ್ಮ ಗುಣ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀವಿನ್ನು ನಿಮ್ಮ ಪತ್ನಿ ಮತ್ತು ಮಗಳು ಝಿವಾ ಜತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ. ಅವರಿಗೂ ನನ್ನ ಶುಭಹಾರೈಕೆಗಳು. ನಿಮ್ಮ ಸಾಧನೆಯಲ್ಲಿ ಅವರ ತ್ಯಾಗವಿದೆ. ಪಂದ್ಯಗಳಲ್ಲಿ ಗೆದ್ದ ಬಳಿಕ ನೀವು ನಿಮ್ಮ ಮುದ್ದಾದ ಮಗಳೊಂದಿಗೆ ಅದನ್ನು ಖುಷಿಯಿಂದ ಆಚರಿಸುವ ಎಷ್ಟೋ ಫೋಟಗಳನ್ನು ನಾನು ನೋಡಿದ್ದೇನೆ. ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನೀವು ಸಮತೋಲನ ಮಾಡಿದ ರೀತಿ ಅನುಕರಣೀಯ. ನಿಮ್ಮ ಭವಿಷ್ಯ ಅದ್ಭುತವಾಗಿರಲಿ..ಒಳ್ಳೆಯದಾಗಲಿ ಎಂದು ಬರೆದಿದ್ದಾರೆ.

ಮೋದಿ ಬರೆದ ಪತ್ರವನ್ನು ಇಂದು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ, ‘ಕಲಾವಿದ, ಸೈನಿಕ, ಕ್ರೀಡಾಳುಗಳು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ತಮ್ಮ ಪರಿಶ್ರಮ, ತ್ಯಾಗ ಮನ್ನಣೆಗೆ ಪಾತ್ರವಾಗಬೇಕು, ಎಲ್ಲರೂ ಪ್ರಶಂಸಿಸಬೇಕು ಎಂದು ಅಪೇಕ್ಷಿಸುತ್ತಾರೆ. ಮೆಚ್ಚುಗೆ ಮತ್ತು ಶುಭಾಶಯಗಳಿಗಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: