ಮೈಸೂರು

ಕನ್ನಡ ಚಳುವಳಿಯ ಮತ್ತೊಂದು ಹೆಸರೇ ವಾಟಾಳ್ ನಾಗರಾಜ್ : ಡಾ.ಸಿ.ಪಿ.ಕೆ ಬಣ್ಣನೆ

ವಾಟಾಳ್ ನಾಗರಾಜ್ ಅಭಿಮಾನಿಗಳ ಬಳಗ ಹಾಗೂ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ಶನಿವಾರ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ‘ವಾಟಾಳ್ ನಾಗರಾಜ್ ಶಾಸನ ಸಭೆಗೆ ಪ್ರವೇಶ-50’ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾಟಾಳ್ ನಾಗರಾಜ್ ಅವರು ವಿಧಾನಸಭೆಯನ್ನು ಪ್ರವೇಶಿಸಿ 50 ವರ್ಷಗಳ ಸಂಭ್ರಮಾಚರಣೆಯ ದಿನವಿದು. ನಿರಂತರವಾಗಿ ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡು ಕನ್ನಡ ಕಟ್ಟಾಳು, ಕಲಿ ಎಂದೇ ಹೆಸರಾಗಿದ್ದಾರೆ. ಕನ್ನಡ ಪರ ಹೋರಾಟ ಮತ್ತು ಚಳುವಳಿಗೆ ಮತ್ತೊಂದು ಹೆಸರು ವಾಟಾಳ್ ನಾಗರಾಜ್. ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯ ಹೆಸರು ಅವರದು. ಅವರ ಹೋರಾಟ ವಿಶಿಷ್ಟ ಹಾಗೂ ವರ್ಣರಂಜಿತವಾದದ್ದು ಎಂದರು.

ವಿಧಾನಸೌಧ ಇಲ್ಲದ ಕರ್ನಾಟವನ್ನು ಕಲ್ಪಿಸಿಕೊಳ್ಳಲು ಸಾಧ‍್ಯವಿಲ್ಲ. ಅಂತೆಯೇ ವಾಟಾಳ್ ನಾಗರಾಜ್ ಇಲ್ಲದ ವಿಧಾನಸಭೆಯನ್ನು ಕಲ್ಪಿಸಿಕೊಳ್ಳಲು ಅಸಾಧ‍್ಯ. ಇಂದು ನಾವೆಲ್ಲರೂ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ನಾಂದಿ ಹಾಕಿದವರೇ ವಾಟಾಳ್. ಇಂತಹ ಗತ ಪುರುಷ ವಿಸ್ಮಯವೂ ಹೌದು, ವಿಚಿತ್ರವೂ ಹೌದು. ಅವರು ಇಂದಿನವರೆಗೂ ಲೆಕ್ಕವಿಲ್ಲದಷ್ಟು ಸಲ ವಿಧಾನಸಭಾ ತ್ಯಾಗ ಮಾಡಿದ್ದಾರೆ. ಆದರೆ ತಮ್ಮ ತತ್ವಾದರ್ಶಗಳನ್ನು ತ್ಯಾಗ ಮಾಡಿಲ್ಲ ಎಂದು ಹೇಳಿದರು.

ವಾಟಾಳ್ ನಾಗರಾಜ್ ಅವರ ಕನ್ನಡ ಪರ ಹೋರಾಟಗಳು ಮತ್ತು ಅವರ ಸ್ಥಾನಮಾನಗಳನ್ನು ಸ್ಮರಿಸಿಕೊಳ್ಳಬೇಕಾದ ಸುದಿನ ಇದು. ಕೆಲವು ಕೃತಘ್ನ ಜನರಿಂದ ಅವರು ಇಂದು ವಿಧಾನಸಭೆಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಮುಂದಿನ ಚುನಾವಣೆಯಲ್ಲಾದರೂ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಿ.ವಿ.ನಂಜರಾಜೇ ಅರಸ್ ಮಾತನಾಡಿ, ವಾಟಾಳ್ ನಾಗರಾಜ್ ಅವರ ಗುರುತು ಕಪ್ಪು ಟೋಪಿ,ಕೋಟು ಮತ್ತು ಕನ್ನಡಕ. ಅವರ ಅವ‍ಶ್ಯಕತೆ ವಿಧಾನ ಸಭೆಗೆ ಇದೆ ಎಂದು ಹೇಳಿದರು.  ಸಾಹಿತಿ ಕೆ.ಎಸ್.ಭಗವಾನ್, ವಾಟಾಳ್ ನಾಗರಾಜ್ ಅವರು 50 ವರ್ಷಗಳ ಹಿಂದೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಇಂದಿನ ಎಲ್ಲಾ ಕನ್ನಡ ಪರ ಹೋರಾಟಗಳಿಗೆ ಮುಖ್ಯ ಪ್ರೇರಣೆ ವಾಟಾಳ್. ಕನ್ನಡದ ಬಗ್ಗೆ ಎಲ್ಲರಲ್ಲೂ ಪ್ರಜ್ಞೆ, ಎಚ್ಚರ ಮತ್ತು ಅಭಿಮಾನ ಮೂಡಲು ವಾಟಾಳ್ ಕಾರಣರಾಗಿದ್ದಾರೆ. ಇವರಿಗೆ ನಾಡೋಜ ಪ್ರಶಸ್ತಿ ನೀಡಬೇಕಿತ್ತು. ಆದರೆ ನಮ್ಮ ದುರ್ದೈವ ಎಂದರು. ಅವರನ್ನು ಕುರಿತಾದ ಜೀವನ ಚರಿತ್ರೆ ಪುಸ್ತಕಗಳು ಬರಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಮಾತನಾಡಿ, ವಾಟಾಳ್ ನಾಗರಾಜ್ ಅವರಿಗೆ ಕನ್ನಡದ ಬಗ್ಗೆ ನಿರಂತರ ಬದ್ಧತೆ ಮತ್ತು ಜಾಗೃತಿ ಇದೆ. ಕನ್ನಡ ಪರ ಹೋರಾಟ ಮಹಾಸಿಂಹ ವಾಟಾಳ್. ಕನ್ನಡದ ಬಗ್ಗೆ ಅತಿಯಾದ ಪ್ರೀತಿ ಅಭಿಮಾನವನ್ನು ಹೊಂದಿರುವ ನಾಯಕ ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ವಾಟಾಳ್ ನಾಗರಾಜು ಅವರು ತಮ್ಮ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿರುವುದಷ್ಟೇ ಅಲ್ಲ, ಮಾಧ‍್ಯಮಗಳ ಜೊತೆಗೂ ಸಹ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ ಎಂದರು. ನೀವು ರಾಜಕೀಯ ಎಂಬ ಕಸದ ಗುಂಡಿಗೆ ಮತ್ತೆ ಪ್ರವೇಶ ಮಾಡಬೇಡಿ. ವಿಶ್ವವಿದ್ಯಾನಿಲಯಗಳು ನೀಡುವ ಡಾಕ್ಟರೇಟ್ ಗಳನ್ನು ಸ್ವೀಕರಿಸಬೇಡಿ. ಜನರು ನಿಮ್ಮ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸ ಅವೆಲ್ಲಕ್ಕಿಂತಲೂ ದೊಡ್ಡದು ಎಂದು ಹೇಳಿದರು. ಇಂದು ಹೋರಾಟ ವೃತ್ತಿಯಾಗಿ ಪರಿಣಮಿಸಿದೆ. ಇದರಿಂದ ಹೋರಾಟದ ಘನತೆ-ಗಾಂಭೀರ್ಯ ಕುಸಿಯುತ್ತಿದೆ ಎಂದರು. ಜೀವಂತಿಕೆ ಮತ್ತು ಕ್ರಿಯಾಶೀಲತೆ ಇಂದಿನ ರಾಜಕಾರಣದಲ್ಲಿ ಕಾಣಸಿಗುತ್ತಿಲ್ಲ ಎಂದು ಬೇಸರಿಸಿದರು.

ವಾಟಾಳ್ ನಾಗರಾಜ್ ತನಗೆ ಶುಭಕೋರಿ ಮಾತನಾಡಿದ ಎಲ್ಲಾ ಗಣ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. 50 ವರ್ಷಗಳ ಹಿಂದಿನ ರಾಜಕೀಯದಲ್ಲಿದ್ದ ಪ್ರಾಮಾಣಿಕ ವ್ಯಕ್ತಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ಶ್ಲಾಘಿಸಿದರು. ತಮ್ಮ 50 ವರ್ಷಗಳ ರಾಜಕೀಯ ಜೀವನದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಸಭಾಧ‍್ಯಕ್ಷ ಕೃಷ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: