ಪ್ರಮುಖ ಸುದ್ದಿಮೈಸೂರು

ಟಿಎಚ್ಒ ಆತ್ಮಹತ್ಯೆ ಪ್ರಕರಣ: ವಾರದೊಳಗೆ ತನಿಖಾ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ

ಮೈಸೂರು,ಆ.25-ನಂಜನಗೂಡು ಟಿಎಚ್ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ತನಿಖಾ ವರದಿ ನೀಡುವಂತೆ ಸರ್ಕಾರ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಗೆ ಸೂಚಿಸಿದೆ.

ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ತನಿಖೆಯ ಆದೇಶ ಸ್ವೀಕರಿಸಿರುವ ಜಿ.ಸಿ.ಪ್ರಕಾಶ್ ಅವರು, ನಿನ್ನೆ ಸಂಜೆಯಿಂದ ತನಿಖೆ ಆರಂಭಿಸಿದ್ದಾರೆ.

ನಿನ್ನೆ ಮಧ್ಯಾಹ್ನವಷ್ಟೇ ಪ್ರಕಾಶ್ ಅವರು ಪ್ರಕರಣದ ತನಿಖೆಗೆ ಸರ್ಕಾರದಿಂದ ಇನ್ನು ಆದೇಶ ಬಂದಿಲ್ಲ. ಇಂದು ಸಂಜೆಯೊಳಗೆ ಆದೇಶ ಬರುವ ಸಾಧ್ಯತೆಯಿದ್ದು, ಆದೇಶ ಬಂದ ಕೂಡಲೇ ತನಿಖೆ ಆರಂಭಿಸಿ ಒಂದು ವಾರದೊಳಗೆ ವರದಿ ನೀಡುತ್ತೇನೆ ಎಂದಿದ್ದರು.

ಡಾ.ನಾಗೇಂದ್ರ ಅವರು ಆ.20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಆರೋಪಗಳು ಕೇಳಿಬಂದಿದ್ದವು. ಪ್ರಕರಣದಲ್ಲಿ ಮಿಶ್ರಾ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಮಿಶ್ರಾ ಪರ, ವಿರೋಧವಾಗಿ ಪ್ರತಿಭಟನೆಗಳು ನಡೆದಿದ್ದವು. ಡಾ.ನಾಗೇಂದ್ರ ಸಾವಿಗೆ ಕಾರಣರಾಗಿರುವ ಮಿಶ್ರಾ ಅವರನ್ನು ವರ್ಗಾವಣೆ ಮಾಡುವಂತೆ ವೈದ್ಯರು ಬಿಗಿ ಪಟ್ಟು ಹಿಡಿದಿದ್ದರು. ಅದರಂತೆ ಮಿಶ್ರಾ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆಗೊಳಿಸಿದೆ.

ಮಿಶ್ರಾ ಪರವಾಗಿ ಪಿಡಿಒಗಳು ಅವರ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ನಿನ್ನೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಇತ್ತ ಮುಷ್ಕರ ಹಿಂಪಡೆದಿರುವ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: