ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ಪಕ್ಷಕ್ಕೆ ಶನಿಕಾಟ ಕಾಡುತ್ತಿದೆ : ಜಗದೀಶ್ ಶೆಟ್ಟರ್

ಕಾಂಗ್ರೆಸ್ ಪಕ್ಷಕ್ಕೆ ಸಾಡೇಸಾತಿ(ಶನಿಕಾಟ) ಕಾಡುತ್ತಿದೆ ಎಂಬುದಕ್ಕೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆ ಪಕ್ಷಕ್ಕೆ ಕೇವಲ ಏಳು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾದದ್ದೇ ಉದಾಹರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಪರ ಪ್ರಚಾರ ಕೈಗೊಂಡಿದ್ದ ಅವರು ಹುಸ್ಕೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಇದ್ದಷ್ಟೂ ಜನರಿಗೆ ತೊಂದರೆ. ಮಳೆ ಬರುವುದಿಲ್ಲ, ಬರಗಾಲ ಹೋಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ಧರಾಮಯ್ಯ ಅವರಂಥ ಹಸೀ ಸುಳ್ಳು ಹೇಳುವ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದರೆ ಅವರಿಂದ ಯಾವ ಸಾಧನೆಯನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬರದಿಂದ ರೈತರು, ಜನ ಸಾಮಾನ್ಯರು ವಿಲಿ ವಿಲಿ ಒದ್ದಾಡುತ್ತಿದ್ದರೂ ಸಹ ಪರಿಸ್ಥಿತಿಯನ್ನು ನಿವಾರಿಸುವಲ್ಲಿ ಅವರು ವಿಫಲವಾಗಿದ್ದಾರೆ ಎಂದು  ದೂರಿದರು.
ಒಂದು ಉತ್ತಮ ಸರ್ಕಾರ ಹೇಗಿರಬೇಕು ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ಹಾಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಮೋದಿ ಅವರ ವರ್ಚಸ್ಸು ಕುಂದಿದೆ ಎಂಬ ಆರೋಪಗಳಿಗೆ ಪ್ರತ್ಯುತ್ತರ ಎಂಬಂತೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಪರವಾಗಿ ಉತ್ತಮ ಫಲಿತಾಂಶ ಬಂದಿರುವುದನ್ನು ಜನರು ಗಮನಿಸಿದ್ದಾರೆ ಎಂದರು.
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಅದಕ್ಕೆ ಮುನ್ನುಡಿಯಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಮಾಜಿ ಸಂಸದ ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್‍ನಲ್ಲಿ ಈಗ ಲೂಟಿ ಹೊಡೆಯುವವರೇ ತುಂಬಿದ್ದು ಮರ್ಯಾದಸ್ಥರೆಲ್ಲ ಪಕ್ಷ ಬಿಟ್ಟು ಹೊರಗೆ ಬರುತ್ತಿದ್ದಾರೆ. ಅನೇಕ ಮುಖಂಡರು ಬಿಜೆಪಿ ಸೇರಿದ್ದಾರೆ. ವಿ.ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಬಿಟ್ಟ ನಂತರ ಜನರ ಕಣ್ಣಿಗೆ ಮಣ್ಣೆರಚಲು ಸಿದ್ಧರಾಮಯ್ಯ ಅಲ್ಲಿ ಇಲ್ಲಿ ಒಂದಷ್ಟು ರಸ್ತೆಗಳಿಗೆ ಕಾಂಕ್ರೀಟ್ ಹಾಕಿಸಿದ್ದಾರೆ ಎಂದು ಟೀಕಿಸಿದರು.
ಅತಿ ಹೆಚ್ಚು ಬಜೆಟ್ ನೀಡಿದ ವ್ಯಕ್ತಿ ತಾವೆಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅವರು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಹಿಂಜರಿದಿದ್ದಾರೆ ಎಂದ ಅವರು, ಇನ್ನು ಮುಂದೆ ರಾಜ್ಯದಲ್ಲಿ ಯಾರೇ ಅಧಿಕಾರ ಹಿಡಿದರೂ ಸಹ ಜನರಿಗೆ ಬೈಕ್ ನೀಡುವ ಯೋಜನೆ ಜಾರಿ ಮಾಡಬಹುದೇ ಹೊರತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೆ ತಂದ ಸೈಕಲ್ ಯೋಜನೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.
ಈ ಉಪ ಚುನಾವಣೆಗಳು ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಇವು ಭವಿಷ್ಯದ ಚುನಾವಣೆಗಳಾಗಿವೆ. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸಲು ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದು ಅದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಚಲನಚಿತ್ರ ನಟ ಕುಮಾರ್ ಬಂಗಾರಪ್ಪ  ಮಾತನಾಡಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಹಿರಿಯರಿಗೆ ಗೌರವವಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದರಿಂದ ಪ್ರಯೋಜನವಿದೆಯೇ ಎಂದು ಜನರು ಚಿಂತಿಸಬೇಕಾಗಿದೆ. ಏಕೆಂದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‍ಗೆ ಮತ ಹಾಕಿದರೆ ಅದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆಯೇ ಹೊರತು ಮತ್ತೇನೂ ಪ್ರಯೋಜನವಾಗದು. ಹಾಗಾಗಿ ಜನರು ಕಾಂಗ್ರೆಸ್ ಆಡಳಿತಕ್ಕೆ ಇತಿಶ್ರೀ ಹಾಡಿ ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಪ್ರಚಾರದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಶಾಸಕರಾದ ಸುರೇಶ್ ಗೌಡ, ನಾಗರಾಜ್, ಮಾಜಿ ಸಚಿವರಾದ ಸಿ.ಹೆಚ್.ವಿಜಯಶಂಕರ್, ಬಿಜೆಪಿ ಮುಖಂಡರಾದ ಎಸ್.ಡಿ.ಮಹೇಂದ್ರ, ಡಾ.ಶಿವರಾಂ ಮತ್ತಿತರರು ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: