ಮೈಸೂರು

ಕನ್ನಡ ಸಾಹಿತ್ಯ ಪರಿಷತ್ತಿನ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸಬೇಕು : ಬನ್ನೂರು ರಾಜು

ಕನ್ನಡ ಸಾಹಿತ್ಯ ಪರಿಷತ್ತಿನ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸದೆ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಬಾರದು ಎಂದು ಸಾಹಿತಿ ಬನ್ನೂರು ಕೆ.ರಾಜು ಆಗ್ರಹಿಸಿದರು.
ಮೈಸೂರಿನ ನಮನ ಕಲಾಮಂಟಪದಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ನಂಜನಗೂಡು ತಿರುಮಲಾಂಬ ಅವರ 130ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆದು 3 ತಿಂಗಳು ತುಂಬಿಲ್ಲ. ಆಗಲೇ ದಾವಂತವಾಗಿ ಮೈಸೂರಿನಲ್ಲಿ ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಕಸಾಪ ಹೊರಟಿರುವುದು ಸೂಕ್ತ ಅಲ್ಲ. ಹಣ ಮಾಡುವ ಉದ್ದೇಶದಿಂದ ಜಿಲ್ಲಾ ಕಸಾಪ ಘಟಕವನ್ನು ಸಾಹಿತ್ಯೀಕರಣಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣ ಮಾಡಿಕೊಂಡಿರುವುದು ದುರಂತ ಎಂದು ಬೇಸರಿಸಿದರು.
ಜಿಲ್ಲಾ ಕಸಾಪ ಘಟಕ ಹಣ ಮಾಡುವ ದಂದೆಯಿಂದ ಸಮ್ಮೇಳನ ಮಾಡಲು ಹೊರಟಿದ್ದು, ರಾಜ್ಯ ಸರ್ಕಾರ ಜಿಲ್ಲಾ ಘಟಕದ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಸಾರ್ವಜನಿಕರಿಗೆ ಕಸಾಪದ ಪಾರದರ್ಶಕತೆ ತೋರಿಸಬೇಕು. ಅಲ್ಲಿಯವರೆಗೂ ಸಮ್ಮೇಳನದ ಪ್ರಕ್ರಿಯೆಯನ್ನು ಆರಂಭಿಸಬಾರದು. ಒಂದು ವೇಳೆ ತನಿಖೆ ಮಾಡದೆ ಸಮ್ಮೇಳನಕ್ಕೆ ಅವಕಾಶ ನೀಡಿದರೆ ಸಾರ್ವಜನಿಕರ ತೆರಿಗೆ ಹಣವನ್ನು ಯಾರದೋ ಗುಂಪೊಂದು ದುರ್ಬಳಕೆ ಮಾಡಿಕೊಳ್ಳಲಿದೆ. ಸಾಹಿತ್ಯ ಹಾಗೂ ಸಾಹಿತಿಗಳನ್ನು ಜಿಲ್ಲಾ ಘಟಕ ಮೂಲೆಗುಂಪು ಮಾಡಿದ್ದು ಸಾಹಿತಿಗಳಲ್ಲದವರು, ವ್ಯಾಪಾರಸ್ಥರು, ಉದ್ಯಮಿಗಳು ಆಳ್ವಿಕೆ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಎಲ್ಲಾ ಹಣಕಾಸು ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕಲ್ಲದೆ, ಮೈಸೂರಿನ ಸಾಂಸ್ಕೃತಿಕ ಘನತೆಯನ್ನು ಹರಾಜು ಹಾಕುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್.ವೆಂಟಕರಾಮಯ್ಯ, ಜಿಲ್ಲಾಧ್ಯಕ್ಷ ಹೊಮ್ಮ ಮಂಜುನಾಥ್, ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ಜೋಯಿಸ್, ಹೇಮಗಂಗಾ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಸೇರಿದಂತೆ ಹಲವರು  ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: