ಪ್ರಮುಖ ಸುದ್ದಿ

ತಲಕಾವೇರಿ ಗುಡ್ಡ ಕುಸಿತ ಪ್ರಕರಣ : ದೊರೆಯದ ಮೃತದೇಹ

ರಾಜ್ಯ( ಮಡಿಕೇರಿ) ಆ. 26 :- ಮಹಾಮಳೆಗೆ ಗಜಗಿರಿ ಬೆಟ್ಟ ಕುಸಿದು ಐವರು ಮೃತಪಟ್ಟ ತಲಕಾವೇರಿ ಪ್ರದೇಶದಲ್ಲಿ ಕಳೆದ 17 ದಿನಗಳಿಂದ ಕಾರ್ಯಾಚರಣೆ ನಡೆಸಿದರೂ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಪತ್ನಿ ಶಾಂತ ಆಚಾರ್ ಹಾಗೂ ಸಹಾಯಕ ಅರ್ಚಕ ಶ್ರೀನಿವಾಸ ಅವರ ಮೃತದೇಹ ದೊರೆಯಲೇ ಇಲ್ಲ.
ಇದೀಗ ಜಿಲ್ಲಾಡಳಿತ ಶೋಧ ಕಾರ್ಯದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ನಿರ್ಧರಿಸಿದೆ. 2018 ರಲ್ಲಿ ಜೋಡುಪಾಲದಲ್ಲಿ ಮಂಜುಳ ಎಂಬಾಕೆಯ ಮೃತದೇಹ ಸಿಗದೆ ಇದ್ದಾಗ ಮತ್ತು ವಿರಾಜಪೇಟೆಯ ತೋರ ಗ್ರಾಮದಲ್ಲಿ ನಾಲ್ವರ ಶವ ಶೋಧ ಅಸಾಧ್ಯವಾದಾಗ ಇದೇ ಕ್ರಮವನ್ನು ಅನುಸರಿಸಲಾಗಿತ್ತು.
ತಲಕಾವೇರಿಯಲ್ಲಿ ಕೆಲವು ದಿನಗಳ ಹಿಂದೆ ನಾರಾಯಣ ಆಚಾರ್, ಸಹೋದರ ಆನಂದತೀರ್ಥ ಹಾಗೂ ಸಹಾಯಕ ಅರ್ಚಕ ರವಿಕಿರಣ್ ಅವರುಗಳ ಮೃತದೇಹ ಮಾತ್ರ ಪತ್ತೆಯಾಗಿತ್ತು. ಪ್ರತಿಕೂಲ ವಾತಾವರಣದ ನಡುವೆಯೂ ಕಾರ್ಯಾಚರಣೆಯನ್ನು ಮುಂದುವರೆಸಲಾಯಿತ್ತಾದರೂ ಉಳಿದ ಇಬ್ಬರ ಶೋಧ ಕಾರ್ಯ ನಡೆದಿತ್ತು. ಆದರೆ ಈಗ ಅನಿವಾರ್ಯವಾಗಿ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ಕೈಬಿಟ್ಟಿದೆ. ಆ.6 ರಂದು ಬಿರುಗಾಳಿ, ಮಳೆಗೆ ಗಜಗಿರಿ ಬೆಟ್ಟ ಕುಸಿದು ಮನೆ ನೆಲಸಮಗೊಂಡು ಐವರು ನಾಪತ್ತೆಯಾಗಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: