ಕರ್ನಾಟಕಪ್ರಮುಖ ಸುದ್ದಿ

ಸೆ.1 ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್, ಅಕ್ಟೋಬರ್ ನಿಂದ ತರಗತಿ ಆರಂಭ: ಡಾ.ಸಿ.ಎನ್.ಅಶ್ವಥ್ ನಾರಾಯಣ್

ಬೆಂಗಳೂರು,ಆ.26-ಇನ್ನು ಐದು ತಿಂಗಳಲ್ಲಿ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಸೆಪ್ಟೆಂಬರ್ 1 ರಿಂದ ಆನ್ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ ಎಂದರು.

ರಾಜ್ಯ ಸರಕಾರವೂ ಮುಂದಿನ ತಿಂಗಳಿಂದ ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜತೆಗೆ, ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.

ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಹೇಳಿದರು. (ಎಂ.ಎನ್)

 

 

Leave a Reply

comments

Related Articles

error: