
ದೇಶ
15 ಸಾವಿರ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ಹೈಜಾಕ್: 6 ಕೋಟಿ ರೂ. ಮೌಲ್ಯದ ಮೊಬೈಲ್ ಲೂಟಿ ಮಾಡಿದ ದರೋಡೆಕೋರರು
ಚಿತ್ತೂರು,ಆ.27-ಸುಮಾರು 15 ಸಾವಿರ ಮೊಬೈಲ್ ಫೋನ್ ಗಳಿದ್ದ ಟ್ರಕ್ ಒಂದನ್ನು ಹೈಜಾಕ್ ಮಾಡಿದ ಹೆದ್ದಾರಿ ದರೋಡೆಕೋರರ ಗುಂಪು ಅದರಲ್ಲಿದ್ದ 6 ಕೋಟಿ ರೂ. ಮೌಲ್ಯದ ಫೋನ್ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶ-ತಮಿಳುನಾಡು ಗಡಿ ನಗರಿಯಲ್ಲಿ ನಡೆದಿದೆ.
ಟ್ರಕ್ ಚೆನ್ನೈನ ಶ್ರಿಪೆರಂಬದೂರ್ನಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿತ್ತು. ದರೋಡೆಕೋರರು ಶ್ರಿಪೆರಂಬದೂರ್ನಿಂದ ಟ್ರಕ್ ಬೆನ್ನಟ್ಟಿ ತಮಿಳುನಾಡು ಗಡಿ ದಾಟಿ ಆಂಧ್ರಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಟ್ರಕ್ ತಡೆದಿದ್ದಾರೆ. ಬಳಿಕ ಚಾಲಕನಿಗೆ ಥಳಿಸಿ, ಬಲವಂತವಾಗಿ ಕೆಳಗಿಳಿಸಿ ಹೈಜಾಕ್ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ನೀಡಿದ ದೂರಿನ ಅನ್ವಯ ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಶೇಷ ಪೊಲೀಸ್ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದರು. ಟ್ರಕ್ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಮತ್ತೊಂದು ವಾಹನದಲ್ಲಿ ಮೊಬೈಲ್ಗಳನ್ನು ತುಂಬಿಕೊಂಡು ಟ್ರಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಟ್ರಕ್ ನಲ್ಲಿದ್ದ ಅರ್ಧಕ್ಕರ್ಧ ಮೊಬೈಲ್ಗಳನ್ನು ದರೊಡೆಕೋರರು ಲೂಟಿ ಮಾಡಿದ್ದಾರೆ.
ಟ್ರಕ್ನಲ್ಲಿ 12 ಕೋಟಿ ಮೌಲ್ಯದ 15 ಸಾವಿರ ಮೊಬೈಲ್ ಫೋನ್ಗಳಿದ್ದವು. ಅದರಲ್ಲಿ ಆರು ಕೋಟಿ ಮೌಲ್ಯದ ಮೊಬೈಲ್ ಫೋನ್ಗಳನ್ನು ಲೂಟಿ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಂತಾರಾಜ್ಯ ಗ್ಯಾಂಗ್ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್, ಎಂ.ಎನ್)