Uncategorized

ನೀಟ್-ಜೆಇಇ ಪರೀಕ್ಷೆ ಮುಂದೂಡುವಂತೆ ಆರು ರಾಜ್ಯಗಳಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆ

ನವದೆಹಲಿ,ಆ.28-ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಆರು ರಾಜ್ಯಗಳು ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.

ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶ ಪರೀಕ್ಷೆ ನೀಟ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ ಜೆಇಇ ಅನ್ನು ಮುಂದೂಡುವಂತೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್‌, ಪಂಜಾಬ್, ರಾಜಸ್ಥಾನ ರಾಜ್ಯಗಳು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿವೆ.

ಪರೀಕ್ಷೆ ಮುಂದೂಡಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸೇರಿ ಹಲವು ಮಂದಿ ಆಗ್ರಹಿಸುತ್ತಲೇ ಇದ್ದಾರೆ. ಆದರೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಮಾತ್ರ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಕಳೆ ವಾರ ವಿರೋಧ ಪಕ್ಷಗಳ ನಾಯಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ಸೇರಿದಂತೆ ಅನೇಕರು ಕೊರೊನಾ ಸಂದರ್ಭದಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಇದನ್ನು ವಿರೋಧಿಸಿ ಸುಪ್ರೀಂ ಮೊರೆ ಹೋಗುವುದಾಗಿಯೂ ತಿಳಿಸಿದ್ದರು.

ಅದರಂತೆ ಇಂದು ಆರು ರಾಜ್ಯಗಳು ಕೊರೊನಾ ಕಾಲದ ಅಪಾಯವನ್ನು ಮನಗಂಡು ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವ ಕೇಂದ್ರದ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ನಿರ್ದೇಶಿಸಲು ಕೋರಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿವೆ.

ಸೆಪ್ಟೆಂಬರ್ 13ಕ್ಕೆ ನೀಟ್ ಪರೀಕ್ಷೆ, ಸೆಪ್ಟೆಂಬರ್ 1 ರಿಂದ 6 ರವರೆಗೆ ಜೆಇಇ ಪರೀಕ್ಷೆಗಳು ನಡೆಯಲಿವೆ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜೆಇಇ ಪರೀಕ್ಷಾ ಕೇಂದ್ರಗಳನ್ನು 570 ರಿಂದ 660ಕ್ಕೆ ಏರಿಸಲಾಗಿದೆ. ನೀಟ್ ಪರೀಕ್ಷಾ ಕೇಂದ್ರಗಳನ್ನು 2,546ರಿಂದ 3,843ಕ್ಕೆ ಹೆಚ್ಚಿಸಲಾಗಿದೆ. ಕೊಠಡಿಗಳಲ್ಲಿ 24 ಪರೀಕ್ಷಾರ್ಥಿಗಳ ಬದಲಾಗಿ 12 ಮಂದಿ ಇರಲಿದ್ದಾರೆ ಎಂದು ಈಗಾಗಲೇ ಎನ್ ಟಿಎ ತಿಳಿಸಿದೆ. ಈ ಬಾರಿ ದೇಶಾದ್ಯಂತ 8.58 ಲಕ್ಷ ಜೆಇಇ ಅಭ್ಯರ್ಥಿಗಳು ಮತ್ತು 15.97 ಲಕ್ಷ ನೀಟ್ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: