ಮೈಸೂರು

‘ಸಂಗೀತ ಆಲಿಸುವುದರಿಂದ ಆರೋಗ್ಯದಲ್ಲಿ ಸಮತೋಲನ’ : ಇಂದ್ರಾಣಿ ಅನಂತರಾಮ್

ಮೈಸೂರು, ಆ.28:- ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಆಗಸ್ಟ್ ಮಾಸದ ‘ತಿಂಗಳ ತಿರುಳು’ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಗುರು ಸಂಗೀತ ಕೇಂದ್ರದ ನಿರ್ದೇಶಕಿ ವಿದುಷಿ ಇಂದ್ರಾಣಿ ಅನಂತರಾಮ್‍ ಮಾತನಾಡಿ, ‘ಸಂಗೀತ ಕೇಳುವುದರಿಂದ ಆರೋಗ್ಯದಲ್ಲಿ ಸಮತೋಲನವನ್ನು, ಮಾನಸಿಕವಾಗಿ ನೆಮ್ಮದಿಯನ್ನು ಕಾಣಬಹುದೆಂದು ತಿಳಿಸಿ, ಇಂದು ನಾವು ಒತ್ತಡದ ಬದುಕಿನಲ್ಲಿ ಜೀವನವನ್ನು ನಿರ್ವಹಿಸುತ್ತಿದ್ದೇವೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಏರುಪೇರು ಉಂಟಾಗುತ್ತಿದ್ದು, ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಇದರಿಂದ ಹೊರಬರಲು ಪ್ರಸ್ತುತ ಸನ್ನಿವೇಶದಲ್ಲಿ ಸಂಗೀತ, ಧ್ಯಾನ, ಪ್ರಾಣಾಯಾಮ, ನೃತ್ಯ, ಸೂರ್ಯ ನಮಸ್ಕಾರ ನಿತ್ಯವೂ ಮಾಡುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಬಹುದೆಂದು ತಿಳಿಸಿದರು. ಸಂಗೀತ ಹೇಳುವುದರಿಂದ ತಮ್ಮನ್ನು ತಾವು ಕಲಾಪ್ರಪಂಚಕ್ಕೆ ತೊಡಗಿಸಿಕೊಳ್ಳುವುದರ ಜೊತೆಗೆ ಪ್ರೇಕ್ಷಕರನ್ನೂ ಸೆಳೆದುಕೊಳ್ಳಬಹುದು ಎಂದು ತಿಳಿಸಿದರು.
ಪಾಶ್ಚಾತ್ಯ ಸಂಗೀತಗಳ ಅಬ್ಬರಗಳ ನಡುವೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ತನ್ನ ನೈಜತೆಯನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಇಂದಿನ ಯುವಜನಾಂಗ ಭಾರತೀಯ ಸಂಸ್ಕೃತಿ, ಕಲೆ, ಸಂಗೀತದತ್ತ ಹೆಚ್ಚಿನ ಒಲವನ್ನು ತೋರಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಕಿ ಶಿಲ್ಪಶ್ರೀ ಅನಿಲ್‍ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಕೂಡ ಸಂಗೀತವನ್ನು ಕಲಿಯುವುದು ಮತ್ತು ಆಲಿಸುವುದರಿಂದ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಪರಂಪರಗತವಾಗಿ ಸಂಗೀತ ಎಂದರೆ ಭಾರತಕ್ಕೆ ಪ್ರಥಮ ಸ್ಥಾನ. ದಾಸಪರಂಪರೆ ಎಂದರೆ ಸಂಗೀತ ಕ್ಷೇತ್ರಕ್ಕೆ ಮೀಸಲಾದ ಪರಂಪರೆಯಾಗಿದ್ದು, ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಸಂಗೀತ ಅತ್ಯಂತ ಅತ್ಯವಶ್ಯಕ ಎಂದು ತಿಳಿಸಿದರು.
ಕನಕ ಯುವ ಸೇನೆ ಅಧ್ಯಕ್ಷ ಎಂ.ರವಿಕುಮಾರ್ ಮಾತನಾಡಿ, ಸಂಗೀತ ಕೊರಾನಾಗೆ ದಿವ್ಯ ಔಷಧಿ. ಎಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ಮಾನಸಿಕ ನೆಮ್ಮದಿ, ಶಾಂತಿ ಇರುತ್ತದೆ ಎಂದು ತಿಳಿಸಿ, ಮಾನಸಿಕ ಒತ್ತಡಗಳಿಂದ ಮನುಷ್ಯ ಹೊರಬರಬಹುದೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಉದ್ಯಮಿ ಕೆ.ಎಂ.ತೀರ್ಥಪ್ರಸಾದ್ ಕೆಸ್ತೂರ್ ಅವರು ನೊವೆಲ್ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ತಲ್ಲಣಗೊಂಡಿರುವ ಸಂದರ್ಭದಲ್ಲಿ ಮನೆಯಲ್ಲಿದ್ದ ಸಂದರ್ಭದಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಯೋಗ, ಪ್ರಾಣಾಯಾಮಗಳಲ್ಲಿ ತೊಡಗಿಸಿಕೊಂಡಾಗ ದೇಹ ಹಾಗೂ ಮನಸ್ಸು ಅತ್ಯಂತ ಉಲ್ಲಾಸದಾಯಕ ವಾಗಿರುತ್ತದೆಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದುಷಿ ಇಂದ್ರಾಣಿ ಅನಂತರಾಮ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಸಮರ್ಪಣಾ ಟ್ರಸ್ಟ್‍ನ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ, ಸಮಾಜ ಸೇವಕರಾದ ಜಿ.ಪಿ.ಹರೀಶ್ ಹಾಗೂ ಎನ್.ಕೌಶಿಕ್, ಅನಿಲ್‍ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಟ್ರಸ್ಟ್ ಖಜಾಂಚಿ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಸ್ವಾಗತಿಸಿ, ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಯಣ್ಯಂ ವಂದಿಸಿದರು. ಕಾರ್ಯಕ್ರಮದ ನಂತರ ವಿದುಷಿ ಇಂದ್ರಾಣಿ ಅನಂತರಾಮ್ ಅವರಿಂದ ಗೀತಗಾಯನ ಕಾರ್ಯಕ್ರಮ ಮೂಡಿಬಂದಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: