ಮೈಸೂರು

ಸಿದ್ದರಾಮಯ್ಯ ದಲಿತ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ : ಎಸ್.ಆರ್.ಶಶಿಕಾಂತ್ ಆರೋಪ

ಕಾಂಗ್ರೆಸ್ ಪಕ್ಷದ ಜಾತಿವಾದಿಗಳು ದಲಿತರಿಗೆ ಯಾವುದೇ ಸವಲತ್ತು ನೀಡದೆ, ದಲಿತರು ರಾಜಕೀಯವಾಗಿ ಉನ್ನತ ಅ‍ಧಿಕಾರವನ್ನು ಪಡೆಯದಂತೆ ವಂಚಿಸುತ್ತಿದ್ದಾರೆ ಎಂದು ಕರ್ನಾಟಕ ಭ್ರಷ್ಟಾಚಾರ ವಿರೋಧಿ ಸಮಿತಿಯ ಅಧ್ಯಕ್ಷ ಎಸ್.ಆರ್.ಶಶಿಕಾಂತ್  ಆರೋಪಿಸಿದರು.
ಭಾನುವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹತೆ ಇದ್ದ ಬಿ.ರಾಚಯ್ಯ ಅವರಿಗೆ ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡದೆ ರಾಜ್ಯಪಾಲರ ಹುದ್ದೆಗೆ ಸೀಮಿತಗೊಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವುದೇ ಸ್ಥಾನ ನೀಡದೆ ಅವರನ್ನು ರಾಜಕೀಯದಿಂದಲೇ ದೂರ ಮಾಡಿದರು. ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತನ್ನ ರಾಜಕೀಯ ಜೀವನದುದ್ದಕ್ಕೂ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ  ಬಂದಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ಹಂತ ಹಂತವಾಗಿ ಪ್ರಬಲ ದಲಿತ ನಾಯಕರ ರಾಜಕೀಯ ಶಕ್ತಿಯನ್ನು ಕುಗ್ಗಿಸಿ ದಲಿತ ಸಮುದಾಯ ಹಿನ್ನೆಡೆ ಅನುಭವಿಸುವಂತೆ ಮಾಡಿದೆ. ಇಂದು ಅಹಿಂದ ಹೆಸರಿನಲ್ಲಿ ಸಮಾಜವಾದಿ ಮುಖವಾಡ ಹಾಕಿಕೊಂಡು ಅಧಿಕಾರಕ್ಕಾಗಿ ಕಾಂಗ್ರೆಸ್ ನೊಳಗೆ ನುಸುಳಿಕೊಂಡ ಸಿದ್ದರಾಮಯ್ಯ ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ಅವರಿಗೆ ಅನ್ಯಾಯ ಮಾಡುವ ಮೂಲಕ ಕಾಂಗ್ರೆಸ್ ನಲ್ಲಿ ದಲಿತ ನಾಯಕರನ್ನು ಮೂಲೆಗುಂಪು ಮಾಡಿ ಇಡೀ ಸಮುದಾಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಕೆಲ ಸ್ವಾರ್ಥಿ ಮತ್ತು ಸ್ವಾಭಿಮಾನವಿಲ್ಲದ ದಲಿತ ಮುಖಂಡರನ್ನು ಎತ್ತಿಕಟ್ಟಿ ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಮುಖ ಜಾತಿಗಳಾದ ವೀರಶೈವರು, ಲಿಂಗಾಯಿತರು, ಒಕ್ಕಲಿಗರು ಹಾಗೂ ದಲಿತ ಜನರ ವಿರುದ್ಧ ದೌರ್ಜನ್ಯ ಎಸಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕ ಅರ್ಥದಲ್ಲಿ ಅಹಿಂದ ನಾಯಕನಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ವೀರಭದ್ರಸ್ವಾಮಿ, ಮರಿಸ್ವಾಮಿ, ಮಹದೇವಮೂರ್ತಿ, ಮಂಜುನಾಥ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: