ಪ್ರಮುಖ ಸುದ್ದಿ

ಕೂಡ್ಲೂರು ಚೆಟ್ಟಳ್ಳಿಯಲ್ಲಿ ನಿಲ್ಲದ ಕಾಡಾನೆ ಉಪಟಳ : ಗ್ರಾಮಗಳ ವಿಂಗಡಣೆಗೆ ಮನವಿ

ರಾಜ್ಯ( ಮಡಿಕೇರಿ) ಆ.31:- ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ಮೂಟೇರ ಹಾಗೂ ಕರ್ಣಯ್ಯನ ಕುಟುಂಬಸ್ಥರ ಕಾಫಿ ತೋಟ ಮತ್ತು ಗದ್ದೆಗಳು ಸಂಪೂರ್ಣವಾಗಿ ನಾಶವಾಗಿದೆ. ಮನೆಗಳ ಬಳಿಯೂ ಸುಳಿದಾಡುತ್ತಿರುವ ಕಾಡಾನೆಗಳು ವಾಹನಗಳಿಗೆ ಹಾನಿ ಮಾಡಲು ಪ್ರಯತ್ನಸಿದ ಘಟನೆಯೂ ನಡೆದಿದೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು ಮತ್ತು ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಬೆಳೆಗಾರ ಮಹೇಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಂಗಡಣೆಗೆ ಮನವಿ
ಕಾಡಾನೆಗಳು ಉಪಟಳ ನೀಡುತ್ತಿರುವ ಕೊಡಗಿನ ಗ್ರಾಮಗಳನ್ನು “ಕಾಡಾನೆಗಳು ಹೆಚ್ಚು ಉಪಟಳ ನೀಡುವ ಸಂತ್ರಸ್ತ ಗ್ರಾಮಗಳು, ಮಧ್ಯಮ ಉಪಟಳ ನೀಡುವ ಗ್ರಾಮಗಳು ಹಾಗೂ ಕಡಿಮೆ ಉಪಟಳ ಇರುವ ಗ್ರಾಮಗಳೆಂದು” ಮೂರು ವಿಧಗಳಲ್ಲಿ ವಿಂಗಡಿಸಿ ಘೋಷಣೆ ಮಾಡಬೇಕೆಂದು ಸೋಮವಾರಪೇಟೆ ತಾಲ್ಲೂಕಿನ ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಮೋದೂರು ಹಾಗೂ ಹೊರೂರು ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ರೀತಿಯಾಗಿ ಗ್ರಾಮಗಳನ್ನು ವಿಂಗಡಿಸುವುದರಿಂದ ಮುಂದಿನ ದಿನಗಳಲ್ಲಿ ನಷ್ಟಕ್ಕೊಳಗಾದ ಗ್ರಾಮಸ್ಥರು ಸರ್ಕಾರದ ಮೂಲಕ ಸೂಕ್ತ ಪರಿಹಾರವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಗ್ರಾಮದ ಪ್ರಮುಖ ಹಾಗೂ ಬೆಳೆಗಾರ ಶಿವಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಾಡಾನೆಗಳು ನಿರಂತರವಾಗಿ ಕಾಡುತ್ತಿದ್ದು, ಇತ್ತೀಚೆಗೆ 2 ವರ್ಷಗಳಿಂದ ಇವುಗಳ ಉಪಟಳ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಡ್ಡಾಡುತ್ತಿರುವ ಕಾಡಾನೆಗಳ ಹಿಂಡು ಬೆಳೆಗಾರರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಅನೇಕ ವಿಧದಲ್ಲಿ ತೊಂದರೆಯನ್ನು ನೀಡುತ್ತಾ ಅಪಾರ ನಷ್ಟವನ್ನು ಉಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: