ಮೈಸೂರು

ಮೈಸೂರು ನಗರದ ಕೆಲವು ಬಡಾವಣೆಗಳಲ್ಲಿ ಪ್ರತಿನಿತ್ಯ ಕಲುಷಿತ ನೀರು ಪೂರೈಕೆ : ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ

ಮೈಸೂರು,ಆ.31:- ಮೈಸೂರು ನಗರದ ಕೆಲವು ಬಡಾವಣೆಗಳಲ್ಲಿ ಪ್ರತಿನಿತ್ಯ ಕಲುಷಿತ ನೀರನ್ನೇ ದಿನ ಬಳಕೆಗೆ ಉಪಯೋಗಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಮೈಸೂರಿನ ಅಗ್ರಹಾರ ಶಂಕರ ಮಠ ರಸ್ತೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದ್ದು, ಪ್ರತಿನಿತ್ಯ ಕೆಂಪು ಬಣ್ಣದಿಂದ ಕೂಡಿದ ನೀರು ಪೂರೈಕೆಯಾಗುತ್ತಿದೆ, ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವ ಕೆಲಸವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಈ ರೀತಿ ಕುಡಿಯುವ ನೀರಿನ ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದು ಒಂದು ಬಡಾವಣೆಯ ಸಮಸ್ಯೆಯಲ್ಲ ನಗರದ ಹಲವು ಬಡಾವಣೆಗಳಲ್ಲಿ ಇದೇ ರೀತಿಯ ಸಮಸ್ಯೆ ಜನರನ್ನು ಕಾಡುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ಕೂಡಲೇ ಮೈಸೂರು ಮಹಾ ನಗರ ಪಾಲಿಕೆ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ನಲ್ಲಿಯಲ್ಲಿ ಇದೇ ರೀತಿ ಬರುತ್ತಿದೆ. ಈ ರೀತಿ ಬರುತ್ತಿದ್ದರೆ ಜನರು ಇದನ್ನು ಕುಡಿಯೋದು ಹೇಗೆ. ಬೆಳಿಗ್ಗೆ 5.30ರಿಂದ 10ಗಂಟೆಯವರೆಗೆ ಸ್ವಚ್ಛವಾಗಿ ಬರತ್ತೆ. ಆಗ ಆದರೆ ಸಂಜೆಯ ವೇಳೆ ಕೆಂಪಾಗಿ ಬರತ್ತೆ. ನಾವು ಇದೇ ನಲ್ಲಿಯಿಂದ ಬರುವ ನೀರನ್ನೇ ಕುಡಿಯಲು ಉಪಯೋಗಿಸುತ್ತೇವೆ, ಇದನ್ನೇ ತುಂಬಿಸಿಟ್ಟುಕೊಳ್ಳುತ್ತೇವೆ. ಅಡಿಗೆಗೂ ಬಳಸುತ್ತೇವೆ. ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡ ಯೋಗ್ಯವಲ್ಲದ ರೀತಿಯಲ್ಲಿ ನೀರು ಬರುತ್ತಿದೆ. ಇದೇ ರೀತಿ ಕೆಂಪು ನೀರು ಬಂದರೆ ನಾವು ಅದನ್ನು ಕುಡಿಯಲು ಬಳಸುವುದು ಹೇಗೆ? ಮೊದಲೇ ಕೊರೋನಾತಂಕದಲ್ಲಿ ಜನರಿದ್ದಾರೆ. ಈ ರೀತಿಯ ಕಲುಷಿತ ನೀರನ್ನು ಕುಡಿದು ನಮ್ಮ ಆರೋಗ್ಯ ಹದಗೆಟ್ಟರೆ ನೋಡಿಕೊಳ್ಳುವವರು ಯಾರು? ನಗರದ ವಾಟರ್ ವರ್ಕ್ಸ್ ನವರು ಮತ್ತು ಮಹಾನಗರ ಪಾಲಿಕೆಯವರು ಇತ್ತ ಗಮನ ಹರಿಸಿ, ಏನಾಗಿದೆ ಎಂಬುದನ್ನು ನೋಡಿ ಸ್ವಚ್ಛ ನೀರನ್ನು ಪೂರೈಸಿ ಎಂದು ಸ್ಥಳಿಯ ನಿವಾಸಿಗಳು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: