ಕರ್ನಾಟಕಪ್ರಮುಖ ಸುದ್ದಿ

ಡ್ರಗ್ಸ್ ಮಾಫಿಯಾ: ಸಿಸಿಬಿ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್ ವಿಚಾರಣೆ

ಬೆಂಗಳೂರು,ಆ.31-ಸ್ಯಾಂಡಲ್ ವುಡ್ ನಲ್ಲಿ ಕೆಲವರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಸಿಬಿ ಕಚೇರಿಗೆ ಆಗಮಿಸಿದ ಇಂದ್ರಜಿತ್ ಲಂಕೇಶ್ ಅವರ ಕೈಯಲ್ಲಿ ಒಂದಷ್ಟು ದಾಖಲೆಗಳಿದ್ದು ಅವುಗಳಲ್ಲಿ ತಾವು ಮಾಡಿರುವ ಆರೋಪಕ್ಕೆ, ನೀಡಿದ್ದ ಹೇಳಿಕೆಗೆ ಸಾಕ್ಷಿಯಾಗಿ ಪೂರಕ ಪುರಾವೆಗಳನ್ನು ತಂದಿರಬಹುದು ಎಂದು ಹೇಳಲಾಗುತ್ತಿದೆ.
ವಿಚಾರಣೆಗೆ ಹಾಜರಾಗಿರುವ ಇಂದ್ರಜಿತ್ ಲಂಕೇಶ್ ಅವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.
ಇದಕ್ಕೂ ಮುನ್ನ ಕಚೇರಿ ಆವರಣದಲ್ಲಿ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು ಇಂದ್ರಜಿತ್ ಲಂಕೇಶ್ ಅವರನ್ನು ಮಾತನಾಡಿಸಿದಾಗ, ವಿಚಾರಣೆ ಮುಗಿಸಿ ಹೊರಬಂದ ಮೇಲೆ ಎಲ್ಲ ಮಾತನಾಡುತ್ತೇನೆ, ಈಗ ಬೇಡ, ನಾನು ಕೂಡ ಪತ್ರಕರ್ತ, ನಿಮ್ಮ ವೃತ್ತಿಯನ್ನು ಗೌರವಿಸುತ್ತೇನೆ, ಆದರೆ ಈಗ ಯಾವುದನ್ನೂ ಹೇಳುವುದಿಲ್ಲ, ಪೊಲೀಸರ ಮುಂದೆ ಸಾಕ್ಷಿಗಳನ್ನು ನೀಡಿ ಬರುತ್ತೇನೆ ಎಂದರು.
ಈ ಪ್ರಕರಣದಲ್ಲಿ ಯಾರಿಂದಲಾದರೂ ಒತ್ತಡವಿದೆಯೇ ಎಂದು ಕೇಳಿದ್ದಕ್ಕೆ ಯಾರಿಂದಲೂ ಒತ್ತಡವಿಲ್ಲ, ನಾನು ನೀಡಿರುವ ಹೇಳಿಕೆಗೆ ಸಾಕ್ಷಿ ಸಮೇತವಾಗಿ ದಾಖಲೆಗಳನ್ನು ಪೊಲೀಸರ ಮುಂದೆ ಒದಗಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಸ್ಯಾಂಡಲ್ ವುಡ್ ನಲ್ಲಿ ಕೆಲ ನಟ, ನಟಿಯರು, ನಿರ್ದೇಶಕರು, ಸಂಗೀತ ನಿರ್ದೇಶಕರು ಮಾದಕ ವಸ್ತು ತೆಗೆದುಕೊಳ್ಳುತ್ತಾರೆ, ಹೊಸದಾಗಿ ಬಂದಿರುವವರಲ್ಲಿ ಈ ಅಭ್ಯಾಸ ಹೆಚ್ಚಾಗಿದೆ, ಈ ಬಗ್ಗೆ ನನ್ನಲ್ಲಿ ಪುರಾವೆಗಳಿವೆ, ಪೊಲೀಸರು ಭದ್ರತೆ ಒದಗಿಸಿದರೆ ಅಂತವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದರು ಇಂದ್ರಜಿತ್.
ಇಂದ್ರಜಿತ್ ಲಂಕೇಶ್ ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವವರ ಪಟ್ಟಿ ಕೊಡಿ ಎಂದು ನಗರ ಅಪರಾಧ ದಳ ಪೊಲೀಸರು ನೊಟೀಸ್ ನೀಡಿದ್ದರು. ಅದರಂತೆ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿರುವ ಇಂದ್ರಜಿತ್ ಲಂಕೇಶ್, ಸ್ಯಾಂಡಲ್ ವುಡ್ ನಲ್ಲಿ ಯಾವೆಲ್ಲಾ ಕಲಾವಿದರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಅವರಿಗೆ ಇರುವ ಸಂಪರ್ಕವೇನು, ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದರಿಂದ ಇನ್ನಷ್ಟು ಮಾದಕ ನಶೆಯ ದಂಧೆ, ಕರಾಳ ಮುಖ ಹೊರಬರಲಿದೆ ಎಂದು ಹೇಳಲಾಗುತ್ತಿದೆ. (ಎಂ.ಎನ್)

Leave a Reply

comments

Related Articles

error: