ದೇಶಪ್ರಮುಖ ಸುದ್ದಿ

1 ರೂ. ಹಿಡಿದಿರುವ ಫೋಟೋ ಪ್ರಕಟಿಸಿ ಮೊದಲ ಪ್ರತಿಕ್ರಿಯೆ ನೀಡಿದ ಪ್ರಶಾಂತ್‌ ಭೂಷಣ್‌

ನವದೆಹಲಿ,ಆ.31-ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ‌ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ಸರ್ವೋಚ್ಚ ನ್ಯಾಯಾಲಯ 1 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ತೀರ್ಪಿನ ಬಳಿಕ ಪ್ರಶಾಂತ್‌ ಭೂಷಣ್‌ ಒಂದು ರೂಪಾಯಿ ಕೈಯಲ್ಲಿ ಹಿಡಿದ ಫೋಟೋವನ್ನು ಪ್ರಕಟಿಸಿ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕವೇ ಪ್ರಕಟಿಸಿದ್ದಾರೆ.
ಟ್ವೀಟ್​ನಲ್ಲಿ ಅವರು ಎರಡು ಫೋಟೋಗಳನ್ನು ಪ್ರಕಟಿಸಿದ್ದು, ಒಂದರಲ್ಲಿ ಅವರು ಹಿರಿಯ ವಕೀಲ ರಾಜೀವ್ ಧವನ್ ಅವರಿಂದ ಒಂದು ರೂಪಾಯಿ ಸ್ವೀಕರಿಸುತ್ತಿರುವ ದೃಶ್ಯವಿದೆ. ಇನ್ನೊಂದರಲ್ಲಿ ಒಂದು ರೂಪಾಯಿ ಹಿಡಿದು ಪೋಸ್ ಕೊಟ್ಟಿರುವ ದೃಶ್ಯವಿದೆ.


ಶೀರ್ಷಿಕೆಯ ರೂಪದಲ್ಲಿ ಅವರು ಹೇಳಿರೋದಿಷ್ಟು- ಇವತ್ತು ನ್ಯಾಯಾಂಗ ನಿಂದನೆ ಕೇಸ್​ನ ತೀರ್ಪು ಬಂದ ಕೂಡಲೇ ನನ್ನ ಲಾಯರ್​ ಮತ್ತು ಹಿರಿಯ ಸಹೋದ್ಯೊಗಿ ರಾಜೀವ್ ಧವನ್ ಅವರು ಒಂದು ರೂಪಾಯಿ ಕೊಡುಗೆಯಾಗಿ ನೀಡಿದ್ರು. ಅದನ್ನು ನಾನು ಗೌರವ ಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಶಾಂತ್‌ ಭೂಷಣ್‌ ಅವರಿಗೆ 1 ರೂಪಾಯಿ ದಂಡ ವಿಧಿಸಿದೆ. ಒಂದೊಮ್ಮೆ ಸೆಪ್ಟೆಂಬರ್‌ 15ರ ಒಳಗೆ ದಂಡ ಕಟ್ಟದೇ ಇದ್ದಲ್ಲಿ, ಅವರು 3 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಮತ್ತು 3 ವರ್ಷ ವಕೀಲಿಕೆ ಅಭ್ಯಾಸದಿಂದ ಅವರನ್ನು ನಿರ್ಬಂಧಿಸಲಾಗುತ್ತದೆ ಎಂದಿದೆ.
ಪ್ರಶಾಂತ್‌ ಭೂಷಣ್‌ ಮಾಡಿದ್ದ ಎರಡು ಟ್ಟೀಟ್‌ಗಳ ಸಂಬಂಧ ಅವರನ್ನು ಆ.14 ರಂದು ದೋಷಿ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ನಂತರ ಅವರಿಗೆ ಕ್ಷಮೆ ಕೇಳಲು ಸಮಯಾವಕಾಶ ನೀಡಲಾಗಿತ್ತು. ಆದರೆ ಎರಡೆರಡು ಬಾರಿ ಅವಕಾಶ ನೀಡಿದ್ದರೂ ಅವರು ಕ್ಷಮೆ ಕೇಳಲು ನಿರಾಕರಿಸಿದ್ದರು. ನಾನು ಅನ್ಯಮನಸ್ಕನಾಗಿ ಈ ಟ್ಟೀಟ್‌ ಮಾಡಿಲ್ಲ ಎಂದು ಹೇಳಿದ್ದ ಅವರು, ‘ನಾನು ಕ್ಷಮೆ ಕೋರುವುದರಿಂದ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ’ ಎಂದಿದ್ದರು.

Leave a Reply

comments

Related Articles

error: