ಕರ್ನಾಟಕಪ್ರಮುಖ ಸುದ್ದಿ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ: 15 ಮಂದಿಯ ಹೆಸರನ್ನು ಸಿಸಿಬಿ ಅಧಿಕಾರಿಗಳಿಗೆ ನೀಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್

ಬೆಂಗಳೂರು,ಆ.31-ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಬಲವಾಗಿ ಬೇರೂರಿದೆ ಎಂದಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಮಾಹಿತಿ ನೀಡಿದ್ದಾರೆ.
ಸುಮಾರು ಐದು ತಾಸು ವಿಚಾರಣೆಯಲ್ಲಿ ಇಂದ್ರಜಿತ್, ಡ್ರಗ್ಸ್ ಜಾಲದ ಬಗ್ಗೆ ತಮ್ಮ ಬಳಿ ಇದ್ದ ಸಾಕ್ಷಿಗಳನ್ನು ನೀಡಿದ್ದಾರೆ. ಜೊತೆಗೆ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ಸುಮಾರು 15 ಮಂದಿಯ ಹೆಸರನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಯಾವೆಲ್ಲ ಕಲಾವಿದರ ಹೆಸರುಗಳನ್ನು ಅಧಿಕಾರಿಗಳ ಮುಂದೆ ಇಂದ್ರಜಿತ್‌ ಹೇಳಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ನಿನ್ನೆ ಮೊನ್ನೆ ಬಂದ ನಟರು ಡ್ರಗ್ಸ್‌ ಮಾಫಿಯಾಗೆ ಬ್ರಾಂಡ್ ಅಂಬಾಸಿಡರ್‌ಗಳು ಆಗಿದ್ದಾರೆ. ನಾನು ಇದುವರೆಗೂ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ನನ್ನ ಬಳಿರುವ ಎಲ್ಲ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವರ ತನಿಖೆಗೆ ಸಹಕಾರವಾಗುವಂತೆ ನನಗೆ ತಿಳಿದ ಎಲ್ಲ ಮಾಹಿತಿಗಳನ್ನು ಅವರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ.
ಯುವ ನಟರು, ಮಕ್ಕಳು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ ಜಾಲ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದರ ಕುರಿತಾಗಿ ಯುವಜನತೆಗೆ ಅರಿವು ಮೂಡಿಸಬೇಕು. ಅದಕ್ಕಾಗಿ ಏನು ಮಾಡಬೇಕೋ ಮಾಡಿದ್ದೇನೆ. ಆದರೆ, ಈಗ ಕೆಲವರ ಹೆಸರುಗಳನ್ನು ಹೇಳುವುದು ದೊಡ್ಡದಲ್ಲ. ಇದರಿಂದ ತನಿಖೆಗೆ ತೊಂದರೆ ಆಗಲಿದೆ. ಹೆಸರು ಹೇಳಿ ಅವರಿಗೆ ವೈಯಕ್ತಿಕವಾಗಿ ಹರ್ಟ್ ಮಾಡಬೇಕು ಅನ್ನೋ ಉದ್ದೇಶ ನನಗಿಲ್ಲ. ನಾನು ಯಾರಿಗೆ ತಲುಪಿಸಬೇಕೋ ಅವರಿಗೆ ಸಾಕ್ಷಿ ಸಮೇತ, ತಿಳಿಸಿದ್ದೇನೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ, ಅವರೆಲ್ಲರ ಹೆಸರನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಸುಮಾರು 10-15 ಜನರ ಹೆಸರು ಕೊಟ್ಟಿದ್ದೇನೆ. ಅಧಿಕಾರಿಗಳ ಬಳಿಯೂ ಒಂದಷ್ಟು ಮಾಹಿತಿ ಇತ್ತು. ಅವರು ಇದರಲ್ಲಿ ಯಶಸ್ಸು ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ನಾನು ಏನೆಲ್ಲ ಮಾಹಿತಿಗಳನ್ನು, ಸಾಕ್ಷಿಗಳನ್ನು ನೀಡಿದ್ದೇನೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಆ ಬಗ್ಗೆ ನಾನು ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Leave a Reply

comments

Related Articles

error: