ಕ್ರೀಡೆ

ಕುಟುಂಬದ ಮೇಲಿನ ಕಾಳಜಿಯಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಕ್ಕೆ; 4-5 ವರ್ಷ ಐಪಿಎಲ್ ಆಡುವ ಇಂಗಿತ ವ್ಯಕ್ತಪಡಿಸಿದ ಸುರೇಶ್ ರೈನಾ

ನವದೆಹಲಿ,ಸೆ.2-ತಮ್ಮ ಕುಟುಂಬದ ಮೇಲಿನ ಕಾಳಜಿಯಿಂದಾಗಿ ತಾವು ಐಪಿಎಲ್‌ 2020 ಟೂರ್ನಿ ತೊರೆದು ಬಂದಿರುವುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಏನೆಂಬುದರ ಬಗ್ಗೆ ಮಾತನಾಡಿರುವ ಸುರೇಶ್ ರೈನಾ, ತಮ್ಮ ಕುಟುಂಬದ ಮೇಲಿನ ಕಾಳಜಿ ಸಲುವಾಗಿಯೇ ತಾವು ಟೂರ್ನಿ ತೊರೆದು ಕೂಡಲೇ ಮನೆಗೆ ಹಿಂದಿರುಗಿದ್ದಾಗಿ ತಿಳಿಸಿದ್ದಾರೆ.

ಇದು ಸಂಪೂರ್ಣ ನನ್ನ ವೈಯಕ್ತಿಕ ನಿರ್ಧಾರ. ನನ್ನ ಕುಟುಂಬದ ಜೊತೆಗಿರುವ ಅವಶ್ಯಕತೆಯಿತ್ತು. ಸಿಎಸ್‌ಕೆ ತಂಡವೂ ನನ್ನ ಕುಟುಂಬದಂತೆ. ಮಾಹಿ ಭಾಯ್‌ ನನಗೆ ಬಹಳ ಮುಖ್ಯ. ಹೀಗಾಗಿ ಐಪಿಎಲ್‌ನಿಂದ ಹೊರಬರುವ ನಿರ್ಧಾರ ಬಹಳ ಕಠಿಣವಾಗಿತ್ತು. ನನ್ನ ಮತ್ತು ಸಿಎಸ್‌ಕೆ ನಡುವೆ ಯಾವುದೇ ತಕರಾರಿಲ್ಲ ಎಂದು ಹೇಳಿದ್ದಾರೆ.

ನನ್ನ ಯುವ ಕುಟುಂಬ ಮನೆಯಲ್ಲಿದೆ. ನನಗೇನಾದರೂ ಆದರೆ ಎಂಬ ಅವರ ಗತಿಯೇನು ಎಂಬ ಭಯ ನನ್ನನ್ನು ಆವರಿಸಿತ್ತು. ನನಗೆ ನನ್ನ ಕುಟುಂಬವೇ ಮುಖ್ಯ. ಈ ಎರಡು ವಾರಗಳಲ್ಲಿ ಅವರ ಬಗ್ಗೆ ಬಹಳ ಚಿಂತೆಯಾಗಿತ್ತು. ಭಾರತಕ್ಕೆ ಬಂದ ಬಳಿಕವೂ ನನ್ನ ಮಕ್ಕಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಏಕೆಂದರೆ ಕ್ವಾರಂಟೈನ್‌ನಲ್ಲಿ ಇದ್ದೇನೆ ಎಂದು ರೈನಾ ತಿಳಿಸಿದ್ದಾರೆ.

ಜೊತೆಗೆ ಮುಂದಿನ 4-5 ವರ್ಷಗಳ ವರೆಗಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮ್ಮ ಆಟ ಮುಂದುವರಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಯಾರೊಬ್ಬರು ಕೂಡ 12.5 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಬೆನ್ನು ತೋರಿಸುವುದಿಲ್ಲ. ಅಂತಹ ಕಠಿಣ ನಿರ್ಧಾರಕ್ಕೆ ಬರಬೇಕಾದರೆ ಬಲವಾದ ಕಾರಣ ಇರಲೇ ಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿ ಆಗಿರಬಹುದು. ಆದರೆ, ನನ್ನಲ್ಲಿನ್ನೂ ವಯಸ್ಸಿದೆ. ಹೀಗಾಗಿ ಸಿಎಸ್‌ಕೆ ತಂಡದ ಪರ ಮುಂದಿನ 4-5 ವರ್ಷಗಳ ಕಾಲ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಸುರೇಶ್‌ ರೈನಾ ಅವರ ಸೋದರತ್ತೆ ಮತ್ತು ಮಾವನ ಮನೆ ಮೇಲೆ ದರೋಡೆಕೋರರು ಆ.19ರಂದು ದಾಳಿ ನಡೆಸಿದ್ದರು. ಘಟನೆಯಲ್ಲಿ ನಡೆದ ಹಲ್ಲೆಯಲ್ಲಿ ರೈನಾ ಅವರ ಮಾವ ಸ್ಥಳದಲ್ಲೇ ಮೃತಪಟ್ಟರೆ, ಅವರ ಕಸಿನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅತ್ತೆಯ ಸ್ಥಿತಿಯೂ ಚಿಂತಾಜನಕವಾಗಿದೆ.

ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಸುರೇಶ್ ರೈನಾ, ನನ್ನ ಕುಟುಂಬಕ್ಕೆ ಆಗಿರುವುದು ಅತ್ಯಂತ ಭಯಾನಕ್ಕಿಂತಲೂ ದೊಡ್ಡ ಸಂಗತಿ. ನನ್ನ ಮಾವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನಿಬ್ಬರು ಕಸಿನ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದುರದೃಷ್ಟವಶಾತ್‌ ಕಳೆದ ರಾತ್ರಿ ನನ್ನ ಒಬ್ಬ ಕಸಿನ್‌ ಕೂಡ ಹಲವು ದಿನಗಳಿಂದ ಸಾವಿನ ವಿರುದ್ಧ ಹೋರಾಡಿ ತೀರಿಕೊಂಡಿದ್ದಾರೆ. ನನ್ನ ಅತ್ತೆಯ ಸ್ಥಿತಿ ಈಗಲೂ ಗಂಭೀರವಾಗಿದ್ದು, ಲೈಫ್‌ ಸಪೋರ್ಟ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದರು.

ಸೂಪರ್ ಕಿಂಗ್ಸ್‌ ತಂಡದ ಮ್ಯಾನೇಜ್ಮೆಂಟ್ ಮತ್ತು ಸುರೇಶ್ ರೈನಾ ನಡುವೆ ಹೋಟೆಲ್‌ ರೂಮ್‌ ವಿಚಾರವಾಗಿ ಗಲಾಟೆ ನಡೆದಿದೆ. ಕ್ಯಾಪ್ಟನ್ ಎಂ.ಎಸ್‌.ಧೋನಿ ಮತ್ತು ರೈನಾ ನಡುವೆ ವೈಮನಸ್ಸು ಮೂಡಿದೆ. ಹೀಗೆ ಹಲವಾರು ಊಹಾ ಪೋಹಗಳು ತಲೆಯೆತ್ತಿದ್ದವು. ಆದರೀಗ ಎಲ್ಲಾ ಊಹೆಗಳಿಗೆ ರೈನಾ ಖುದ್ದಾಗಿ ತೆರೆ ಎಳೆದಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: