ಕರ್ನಾಟಕಮನರಂಜನೆ

ಐಪ್ಯಾಡ್ -ಹಾರ್ಡ್‌ಡಿಸ್ಕ್ ನೊಂದಿಗೆ ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್ ಲಂಕೇಶ್: ವಿಚಾರಣೆ ಅಂತ್ಯ

ಬೆಂಗಳೂರು,ಸೆ.3-ಸ್ಯಾಂಡಲ್ ವುಡ್ ನಲ್ಲಿ ಕೆಲ ಕಲಾವಿದರು ಡ್ರಗ್ಸ್ ಸೇವಿಸುತ್ತಾರೆ. ಡೀಲರ್ ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಇಂದ್ರಜಿತ್ ಲಂಕೇಶ್ ಈ ಬಾರಿ ವಿಚಾರಣೆಗೆ ಹಾಜರಾಗುವಾಗ ಐಪ್ಯಾಡ್ -ಹಾರ್ಡ್‌ಡಿಸ್ಕ್ ಇರುವ ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಸದ್ಯ ಇಂದ್ರಜಿತ್ ಅವರ ಇಂದಿನ ವಿಚಾರಣೆ ಮುಗಿದಿದ್ದು, ಯಾವೆಲ್ಲ ಮಾಹಿತಿಗಳನ್ನು ಸಾಕ್ಷಿ ಸಮೇತ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ.

ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದಾಗ ಸಾಕಷ್ಟು ಮಾಹಿತಿ ನೀಡಿದ್ದೇನೆ. ಈಗ ಮತ್ತೆ ಕರೆದಿದ್ದಾರೆ. ತನಿಖೆಗೆ ಸಹಕರಿಸುವ ಉದ್ದೇಶದಿಂದ ಬಂದಿದ್ದೇನೆ. ಬ್ಯಾಗ್‌ನಲ್ಲಿ ಹಾರ್ಡ್‌ಡಿಸ್ಕ್ ಹಾಗೂ ಐಪ್ಯಾಡ್ ಇದೆ, ಅದರಲ್ಲಿ ಏನಿದೆ ಎಂದು ಕೇಳಬೇಡಿ ಎಂದು ಕುತೂಹಲ ಮೂಡಿಸಿದ್ದರು.

ನಾನು ಸಾಕಷ್ಟು ಮಾಹಿತಿ ನೀಡಿದ್ದೇನೆ. ನಾನು ಕೊಟ್ಟಿರುವ ದಾಖಲೆಗಳ ಬಗ್ಗೆ ಮಾಹಿತಿ ಕೊಡಲ್ಲ. ಯಾಕಂದ್ರೆ, ಅದು ಬಹಿರಂಗವಾದರೆ ತನಿಖೆಗೆ ಅಡ್ಡಿಯಾಗುತ್ತದೆ. ಮೊನ್ನೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ. ಈಗಲೂ ಎಲ್ಲ ಪ್ರಶ್ನೆಗೂ ಉತ್ತರ ಕೊಡ್ತೇನೆ. ಸಂಪೂರ್ಣವಾಗಿ ಸಹಕರಿಸುತ್ತಿದ್ದೇನೆ. ಉಳಿದ ಮಾಹಿತಿಗಳನ್ನು ಸಿಸಿಬಿ ಅವರನ್ನೇ ಕೇಳಬೇಕು. ಬಂಧಿತ ಆರೋಪಿ ಅನಿಕಾ ನಾಲ್ಕು ಪುಟದ ಹೇಳಿಕೆ ನೀಡಿದ್ದಾರೆ. ಹಲವರು ಪಟ್ಟಿ ಸಹ ನೀಡಿದ್ದಾರೆ. ಅಧಿಕಾರಿಗಳು ತನಿಖೆ ಮಾಡಿದ್ದಾರೆ. ನಾನು ಸಹ ವಿವರ ನೀಡಿದ್ದೇನೆ ಎಂದು ಹೇಳಿದ್ದಾರೆ.

ಕಾರ್ಯಕ್ರಮ ನಿರೂಪಕರು, ಹೊಸದಾಗಿ ಬಂದ ಕೆಲವು ಕಲಾವಿದರು ಭಾಗಿಯಾಗಿದ್ದು, ಈ ಜಾಲದಲ್ಲಿದ್ದಾರೆ. ಅವರನ್ನು ಕ್ಲೀನ್ ಮಾಡಬೇಕು ಎಂದಿರುವ ಅವರು, ಕೆಲವರು ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತೆ ಅಂತ ಅಂದುಕೊಂಡಿದ್ದಾರೆ. ಅದು ತಪ್ಪು, ಇದರಿಂದ ಇಂಡಸ್ಟ್ರಿ ಸ್ವಚ್ಛವಾಗುತ್ತೆ. ಈ ಹಿಂದೆ ಕೆಲವು ಘಟನೆಗಳು ಆದಾಗ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಅವರನ್ನು ಕರೆಸಿ ಬುದ್ದಿವಾದ ಹೇಳಬೇಕಿತ್ತು. ಮೊಳಕೆಯಲ್ಲಿ ನಿಯಂತ್ರಿಸಿದ್ದರೆ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಬನ್ನಿ ನನ್ನ ಜೊತೆ ಹೋರಾಟಕ್ಕೆ ಕೈ ಜೋಡಿಸಿ, ಇಡೀ ಇಂಡಸ್ಟ್ರಿ ಸ್ವಚ್ಛವಾಗುತ್ತೆ ಎಂದಿದ್ದಾರೆ. (ಎಂ.ಎನ್)

 

Leave a Reply

comments

Related Articles

error: