ದೇಶಪ್ರಮುಖ ಸುದ್ದಿ

3-4 ವರ್ಷಗಳಿಗೊಮ್ಮೆ ನೋಟುಗಳ ಭದ್ರತಾ ವೈಶಿಷ್ಟ್ಯಗಳನ್ನು ಬದಲಾಯಿಸಲು ಸರ್ಕಾರ ತೀರ್ಮಾನ

ನವದೆಹಲಿ: ಹೊಸ 2 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳ ನಕಲು ತಡೆಯುವ ಸಲುವಾಗಿ ಪ್ರತಿ 3-4 ವರ್ಷಗಳಿಗೊಮ್ಮೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಈ ನೋಟುಗಳ ಭದ್ರತಾ ವೈಶಿಷ್ಟ್ಯಗಳನ್ನು ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.

ನೋಟ್‍ಬ್ಯಾನ್ ಆದ ಬಳಿಕ ಕಳೆದ 4 ತಿಂಗಳಲ್ಲಿ ಹೆಚ್ಚಿನ ಮೊತ್ತದ ನಕಲಿ ನೋಟ್‍ಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ನಿಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಗುರುವಾರದಂದು ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಹಣಕಾಸು ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹ್ರಿಶಿ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ನಿಧಾರದ ಬಗ್ಗೆ ಗೃಹ ಇಲಾಖೆಯ ಅಧಿಕಾರಿಗಳು ಪ್ರಸ್ತಾಪಿಸಿ, ಬಹುತೇಕ ಮುಂದುವರಿದ ದೇಶಗಳು ತಮ್ಮ ಕರೆನ್ಸಿ ನೋಟ್‍ಗಳ ಭದ್ರತಾ ವೈಶಿಷ್ಟ್ಯಗಳನ್ನು 3-4 ವರ್ಷಗಳಿಗೊಮ್ಮೆ ಬದಲಾಯಿಸುತ್ತವೆ. ಆದ್ದರಿಂದ ಭಾರತವೂ ಕೂಡ ಈ ನಿಯಮ ಅನುಸರಿಸುವುದು ಅವಶ್ಯಕ ಎಂದು ಹೇಳಿದ್ದಾರೆ.ನೋಟ್‍ಬ್ಯಾನ್ ಗಿಂತಲೂ ಮುಂಚೆ ಇದ್ದ ಗರಿಷ್ಠ ಮುಖಬೆಲೆಯ 1 ಸಾವಿರ ರೂ. ನೋಟಿನಲ್ಲಿ ದೀರ್ಘ ಕಾಲದ ವರೆಗೆ ಯಾವುದೇ ದೊಡ್ಡ ಬದಲಾವಣೆ ಆಗಿರಲಿಲ್ಲ.ಇತ್ತೀಚೆಗೆ ಜಪ್ತಿ ಮಾಡಲಾದ ಹಲವು ನಕಲಿ ನೋಟ್‍ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹೊಸ 2 ಸಾವಿರ ರೂ. ನೋಟಿನಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಅನುಕರಿಸಿರುವುದು ಪತ್ತೆಯಾಗಿದೆ. ಇವುಗಳಲ್ಲಿ ನೋಟಿನಲ್ಲಿನ ಪಾರದರ್ಶಕ ಭಾಗ, ವಾಟರ್ ಮಾರ್ಕ್, ಅಶೋಕ ಸ್ತಂಭ, ಎಡಭಾಗದಲ್ಲಿನ 2000 ರೂ. ಮುದ್ರಣ, ದೇವನಾಗರಿ ಲಿಪಿಯಲ್ಲಿರೋ ನೋಟಿನ ಮುಖಬೆಲೆಯ ಮುದ್ರಣವೂ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಂದ್ರಯಾನ್‍ನ ಚಿತ್ರ, ಸ್ವಚ್ಛ ಭಾರತ ಲಾಂಛನ ಹಾಗೂ ನೋಟು ಮುದ್ರಣದ ವರ್ಷವನ್ನು ನೋಟಿನ ವಿರುದ್ಧ ಭಾಗದಲ್ಲಿ ನಕಲು ಮಾಡಲಾಗಿದೆ. ನಕಲಿ ನೋಟುಗಳ ಮುದ್ರಣ ಹಾಗೂ ಪೇಪರ್ ಗುಣಮಟ್ಟ ಕಳಪೆಯಾಗಿದ್ರೂ ಅವು ಒರಿಜಿನಲ್ ನೋಟುಗಳನ್ನೇ ಹೋಲುವಂತಿವೆ.ನೋಟುಗಳ ಭದ್ರತಾ ವೈಶಿಷ್ಟ್ಯಗಳನ್ನು 3-4 ವರ್ಷಗಳಿಗೊಮ್ಮೆ ಬದಲಾಯಿಸೋದರಿಂದ ದೊಡ್ಡ ಪ್ರಮಾಣದಲ್ಲಿ ನಕಲಿ ನೋಟುಗಳಿಗೆ ಬ್ರೇಕ್ ಹಾಕಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.2016ರಲ್ಲಿ ಕೋಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 400 ಕೋಟಿ ರೂ. ಮೌಲ್ಯದಷ್ಟು ನಕಲಿ ನೋಟು ಚಲಾವಣೆಯಲ್ಲಿದೆ ಎಂದು ವರದಿಯಾಗಿತ್ತು.  (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: