ವಿದೇಶ

ಶ್ರೀಲಂಕಾದ ಕರಾವಳಿ ತೀರದಲ್ಲಿ ತೈಲ ಟ್ಯಾಂಕರ್ ವೊಂದರಲ್ಲಿ ಸ್ಫೋಟ: ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಹಾಯ ಕೇಳಿದ ಶ್ರೀಲಂಕಾ

ಕೋಲಂಬೋ,ಸೆ.4-ಶ್ರೀಲಂಕಾದ ಕರಾವಳಿ ತೀರದಲ್ಲಿ ತೈಲ ಟ್ಯಾಂಕರ್‌ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಬೆಂಕಿ ನಂದಿಸಲು ಶ್ರೀಲಂಕಾ ನೌಕಾಸೇನೆ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಹಾಯ ಕೇಳಿದೆ.

ಶ್ರೀಲಂಕಾ ಕರಾವಳಿಯ ಪೂರ್ವಕ್ಕೆ 37 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಪನಾಮಾ ನೋಂದಣಿಯ ಆಯಿಲ್ ಟ್ಯಾಂಕರ್ ನ್ಯೂ ಡೈಮಂಡ್ 2,70,000 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲವನ್ನು ಕುವೈತ್‌ನಿಂದ ಭಾರತಕ್ಕೆ ತರುತ್ತಿತ್ತು.

ಬೆಂಕಿ ನಂದಿಸಲು ಶ್ರೀಲಂಕಾ ನೌಕಾಸೇನೆ ಭಾರತೀಯ ಕರಾವಳಿ ರಕ್ಷಣಾ ಪಡೆ(ಕೋಸ್ಟ್ ಗಾರ್ಡ್) ಸಹಾಯ ಕೇಳಿದ್ದು, ಕೂಡಲೇ ಸ್ಥಳಕ್ಕೆ ಒಂದು ವಿಮಾನ ಹಾಗೂ ಐಸಿಜಿ ಹಡಗನ್ನು ಕರಾವಳಿ ರಕ್ಷಣಾ ಪಡೆ ರವಾನಿಸಿದೆ. ಶ್ರೀಲಂಕಾ ನೌಕಾಸೇನೆ ಮನವಿಯ ಮೇರೆಗೆ ‘ಎಂಟಿ ನ್ಯೂ ಡೈಮಂಡ್’ ತೈಲ ಟ್ಯಾಂಕರ್‌ಗೆ ಹೊತ್ತಿಕೊಂಡಿರುವ ಬೆಂಕಿ ನಂದಿಸಲು ಅಗ್ನಿಶಾಮಕ ನೆರವನ್ನು ಒದಗಿಸಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಸ್ಪಷ್ಟಪಡಿಸಿದೆ.

ಸ್ಫೋಟದ ಪರಿಣಾಮವಾಗಿ ತೈಲ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಹೊಗೆ ಆವರಿಸಿದೆ. ಸಿಬ್ಬಂದಿ ರಕ್ಷಣೆ ಜೊತೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ನಿರತವಾಗಿದೆ.

ಕೇರಳ ತೀರದಲ್ಲಿ ಕಟ್ಟೆಚ್ಚರ:

ಒಂದು ವೇಳೆ ಸಮುದ್ರದಲ್ಲೇನಾದರೂ ತೈಲ ಸೋರಿಕೆಯಾಗಿದ್ದರೆ ಸುಮಾರು 600 ಕಿ.ಮೀ ಚದರದಷ್ಟು ಕರಾವಳಿ ಪ್ರದೇಶಕ್ಕೆ ಅಪಾಯ ಆಗುವ ಎಲ್ಲಾ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ, ಕೇರಳಿಗರು ಆತಂಕದಲ್ಲಿ ಇದ್ದಾರೆ. ಪ್ರಾಥಮಿಕ ಅಧ್ಯಯನ ಪ್ರಕಾರ ಸಮುದ್ರಕ್ಕೆ ಸೋರಿಕೆಯಾದ ತೈಲವು ಶೀಘ್ರದಲ್ಲಿಯೇ ಕೇರಳ ತೀರಕ್ಕೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕರಾವಳಿ ಭಾಗದಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದರೆ ರಾಜ್ಯದ ಮೀನುಗಾರಿಕೆ ವಲಯ ಹಾಗೂ ಪರಿಸರಕ್ಕೆ ಅಪಾರ ಹಾನಿಯಾಗಲಿದೆ. ತೈಲ ಸೋರಿಕೆ ಸಂಕಷ್ಟ ಸಂಭವಿಸಿದರೆ ಅದನ್ನು ಎದುರಿಸುವ ಯಾವುದೇ ವ್ಯವಸ್ಥೆ ಕೇರಳದಲ್ಲಿಲ್ಲ. ಇದು ಕೇರಳ ಸರ್ಕಾರವನ್ನು ಚಿಂತೆಗೇಡು ಮಾಡಿದೆ. ಇದೇ ಸಂಬಂಧವಾಗಿ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (ಐಎನ್‌ಸಿಒಐಎಸ್) ಜತೆ ಸಂಪರ್ಕ ಸಾಧಿಸಿರುವ ಸರ್ಕಾರ, ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: