ಕರ್ನಾಟಕಪ್ರಮುಖ ಸುದ್ದಿಮೈಸೂರು

ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧವಾಗಿರುವ ಧೂಳು, ಹೊಂಡಮಯ ರಸ್ತೆಗಳು

page-1-lead-3-webದಸರಾ ಹಬ್ಬದ ಸಮಯದಲ್ಲಿ ‘ಬ್ರಾಂಡ್ ಮೈಸೂರು-ಬ್ರಾಂಡ್ ದಸರಾ’ ವಾಗಿ ಮೈಸೂರನ್ನು ನೋಡಲಾಗುತ್ತದೆ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದುಕರೆಯಲಾಗಿದ್ದು, ದಸರಾ ಹಬ್ಬಕ್ಕೆ ಸಂಪೂರ್ಣ ಸಿದ್ಧವಾಗಿದೆ. ಆದರೆ ಅಧಿಕಾರಿಗಳು ಮೈಸೂರನ್ನು ಹೇಗೆಂದು ಬಿಂಬಿಸುತ್ತಾರೆ? ಗುಂಡಿ ಮತ್ತು ಧೂಳುಮಯ ರಸ್ತೆಗಳಿಂದಲೋ! ನಗರದ ಪ್ರಸ್ತುತ ಸ್ಥಿತಿಯು ವಿಶ್ವವಿಖ್ಯಾತ ದಸರಾದ ಪೂರ್ವ ತಯಾರಿಯ ನೈಜ ದರ್ಶನವನ್ನು ನೀಡುತ್ತಿದೆ.

ನಗರದಲ್ಲಿ ವರ್ಷದ ಹಿಂದೆಯೇ ರಸ್ತೆ ಕಾಮಗಾರಿ ಆರಂಭವಾಗಿದೆ. ನಗರದ ಪ್ರಮುಖ ರಸ್ತೆಗಳ ಜಾಗದಲ್ಲಿ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳು ಬರಲಿವೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಪ್ರತಿ ವರ್ಷ ದಸರಾ ವೀಕ್ಷಣೆಗೆ ಆಗಮಿಸುವ ಹೊರ ಭಾಗದ ಜನರಿಗೆ ಮೈಸೂರನ್ನು ಸುಂದರವಾಗಿ ಕಾಣಿಸಲು ದಸರಾ ಹತ್ತಿರ ಬಂತೆಂದರೆ ಮಾತ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುತ್ತವೆ.

ದಸರಾ ಆರಂಭಕ್ಕೆ ಕೇವಲ ಮೂರು ದಿನ ಬಾಕಿಯಿದ್ದು, ರಸ್ತೆ ಕಾಮಗಾರಿ ಮುಗಿಯುವಂತೆ ಕಾಣುತ್ತಿಲ್ಲ. ಮೈಸೂರಿನ ಕೆಲವೆಡೆ ರಸ್ತೆ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಿ ಕ್ಷಿಪ್ರಗತಿಯಲ್ಲಿ ಕೆಲಸ ಮುಗಿಸಲಾಗಿದೆ. ಆದರೆ, ಮೈಸೂರಿನ ಹೃದಯ ಭಾಗ ಎಂದು ಕರೆಯಲ್ಪಡುವ ಅಗ್ರಹಾರ ಮತ್ತು ಇತರೆಡೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿ ನಡೆದಿರುವ  ಅರ್ಧಂಬರ್ಧ ಕಾಮಗಾರಿಯು ಅವಘಡಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಅಗ್ರಹಾರದ ರಾಮಾನುಜ ರಸ್ತೆ ನಿವಾಸಿ ರಂಗನಾಥ್ ದೂರಿದ್ದಾರೆ.

ಎರಡು ದಿನಗಳೊಳಗೆ ರಸ್ತೆ ಕಾಮಗಾರಿಗಳು ಮುಗಿಯಲಿದ್ದು, ಅಲ್ಲಿಯವರೆಗೆ ಪ್ರಯಾಣಿಕರು ತಾಳ್ಮೆಯಿಂದ ಸಮಸ್ಯೆ ಎದುರಿಸಬೇಕು. ಮುಂಬರುವ ದಿನಗಳಲ್ಲಿ ವಾರ್ಡ್‍ನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವುದು ಎಂದು ಕಾರ್ಪೊರೇಟರ್ ಸುನಿಲ್ ಕುಮಾರ್ ಸಿಟಿ ಟುಡೇಗೆ ತಿಳಿಸಿದರು.

ಆಟೋ ಚಾಲಕ ಕೆಂಪರಾಜೇ ಅರಸ್ ಸಿಟಿ ಟುಡೇ ಜತೆ ಮಾತನಾಡಿ, ಮೈಸೂರಿನ ರಸ್ತೆಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ದಸರಾ ಸಮಯಕ್ಕೆ ಹಣ ಸುರಿಯುವುದು ಮುಖ್ಯವಲ್ಲ. ಪ್ರವಾಸಿಗರಿಗೆ ಮೈಸೂರಿನ ಗುಣಮಟ್ಟದ ರಸ್ತೆಗಳನ್ನು ತೋರಿಸುವುದು ಮುಖ್ಯ. ಪ್ರಸ್ತುತ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದ್ದು, ಇದರ ನೇರ ಪರಿಣಾಮ ಆಟೋಗಳ ಮೇಲಾಗುತ್ತಿದೆ. ಹೆಚ್ಚಿನ ಪ್ರವಾಸಿಗರು ಆಟೋಗಳನ್ನು ಅವಲಂಬಿಸುತ್ತಿಲ್ಲ. ತಮ್ಮ ಸ್ವಂತ ಅಥವಾ ಟೂರಿಸ್ಟ್ ವಾಹನಗಳಲ್ಲಿ ಬರುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸರಕಾರ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ. ರಸ್ತೆಗಳು ನಮ್ಮ ರಾಜ್ಯದ ಅಭಿವೃದ್ಧಿಯ ಪ್ರತಿಬಿಂಬವಾಗಿವೆ. ಸಾವಿರಾರು ಜನ ಕೆಆರ್‍ಎಸ್‍ ಮತ್ತು ಮೈಸೂರಿಗೆ ಭೇಟಿ ನೀಡುತ್ತಾರೆ. ರಸ್ತೆಗಳ ಸ್ಥಿತಿಯನ್ನು ನೋಡಿ ವಾಹನ ಚಲಾಯಿಸಲು ಹಿಂದೇಟು ಹಾಕುತ್ತಾರೆ. ಪಿಡಬ್ಲ್ಯೂಡಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಈ ವಿಚಾರದ ಬಗ್ಗೆ ಗಮನ ಹರಿಸಬೇಕೆಂದು ಟ್ರಾವೆಲ್ಸ್ ಏಜೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಸಿಗರು ಸಬ್‍-ಅರ್ಬನ್ ಬಸ್‍ಸ್ಟ್ಯಾಂಡ್‍ನಿಂದ ಮೈಸೂರಿಗೆ ಕಾಲಿಡುತ್ತಿದ್ದಂತೆ ಗುಂಡಿ ಮತ್ತು ಧೂಳುಮಯ ರಸ್ತೆಗಳು ಅವರನ್ನು ಸ್ವಾಗತಿಸುತ್ತವೆ. ಯಾದವಗಿರಿ, ಒಂಟಿಕೊಪ್ಪಲು, ಗೋಕುಲಂ, ರಾಜೇಂದ್ರನಗರದ ರಸ್ತೆ ಸುಧಾರಣೆಯಾಗುವ ಅಗತ್ಯವಿದೆ ಎಂದು ಶಾಸಕ ವಾಸು ಹೇಳಿದ್ದಾರೆ.

 

 

 

Leave a Reply

comments

Related Articles

error: