ಮೈಸೂರು

ಭಾಷೆ ಮಧುರ ಬಾಂಧವ್ಯದ ಮಾಧ್ಯಮ : ಸುತ್ತೂರು ಶ್ರೀ

ಮೈಸೂರು,ಸೆ.7:- ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾದುದಲ್ಲ. ವ್ಯಕ್ತಿಗಳ ನಡುವೆ ಮಧುರ ಬಾಂಧವ್ಯವನ್ನು ಬೆಸೆಯುವ ಅಪೂರ್ವವಾದ ಶಕ್ತಿ ಭಾಷೆಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಇತ್ತೀಚೆಗೆ ಅಮೆರಿಕದ ಅಕ್ಕ ಆನ್ಲೈನ್ನಲ್ಲಿ ಆಯೋಜಿಸಿದ್ದ ಅಕ್ಕ ವರ್ಚುವಲ್ ವಿಶ್ವ ಕನ್ನಡ ಸಮ್ಮೇಳನದ ದಿವ್ಯಸಾನ್ನಿಧ್ಯ ವಹಿಸಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇತರೆಲ್ಲ ಭಾಷೆಗಳಿಗಿಂತ ಶ್ರೇಷ್ಠವಾದುದು. ಅಕ್ಕ ಸಂಘದವರು ಅಮೆರಿಕದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆಚಾರ್ಯರು, ಬಸವಾದಿ ಪ್ರಮಥರು, ದಾಸರು ಮತ್ತು ಜನಪದರು ಕನ್ನಡದ ಮುಕುಟ ಮಣಿಗಳಾಗಿ ಧರ್ಮ, ಸಂಸ್ಕೃತಿ, ಭಾಷೆಯನ್ನು ಶ್ರೀಮಂತಗೊಳಿಸಿದರು. ಯಾವುದೇ ಭಾಷೆಯನ್ನು ಉಳಿಸಿ ಬೆಳಸುವುದು ಆಯಾ ಕಾಲಮಾನದ ಜನಾಂಗದವರ ಆದ್ಯ ಕರ್ತವ್ಯ. ಕರ್ನಾಟಕದ ಪ್ರಮುಖ ನಗರಗಳಲ್ಲೆ ಕನ್ನಡವನ್ನು ಉಳಿಸಲು ಹೋರಾಡಬೇಕಾದಂತಹ ಅನಿವಾರ್ಯತೆ ಉಂಟಾಗಿದೆ. ಸಾವಿರಾರು ಮೈಲು ದೂರದಲ್ಲಿ ಭಾಷೆಯ ಮೇಲೆ ಪ್ರೀತಿ, ಗೌರವಗಳನ್ನು ಹೊಂದಿ ಸಂಘಟನೆ ಮಾಡಿ ಕನ್ನಡ ಜಾಗೃತಿ ಮತ್ತು ಮತ್ತು ಬೆಳವಣಿಗೆಗೆ ಅಕ್ಕ ಕಂಕಣ ತೊಟ್ಟು ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರನ್ನು ಮರೆಯಬಾರದು. ಓದಿದ ಶಾಲೆ, ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು. ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಅಕ್ಕ ಸಮ್ಮೇಳನದ ನೆಪದಲ್ಲಿ ಎಲ್ಲ ಕನ್ನಡಿಗರು ಒಟ್ಟಾಗಿ ಸೇರುವುದು ಸಂತಸದ ಸಂಗತಿ. ಕನ್ನಡ ನೆಲ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕನ್ನಡಿಗರು, ಕನ್ನಡದ ಕಂಪನ್ನು ಪಸರಿಸಲು ಕಾರಣರಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಮತ್ತು ಉಡುಪಿ ಪುತ್ತಿಗೆ ಮಠದ ಸುಗಣೇಂದ್ರತೀರ್ಥ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಸಚಿವರುಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಎಸ್. ಬೊಮ್ಮಾಯಿ, ಸಿ.ಟಿ. ರವಿ, ಸಂಸದರಾದ ಶಿವಕುಮಾರ್ ಉದಾಸಿ, ಅಕ್ಕ ಸಂಘದ ಅಮರನಾಥ್ಗೌಡ, ತುಮಕೂರು ದಯಾನಂದ, ಬಾಬು ಕಿಲಾರ ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: