ಪ್ರಮುಖ ಸುದ್ದಿ

ಬೆಳ್ಳಂಬೆಳಿಗ್ಗೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ : ನಟಿ ಸಂಜನಾ ಸಿಸಿಬಿ ವಶಕ್ಕೆ

ರಾಜ್ಯ(ಬೆಂಗಳೂರು)ಸೆ.8:- ಡ್ರಗ್ ಜಾಲಕ್ಕೂ ನನಗೂ ಇದಕ್ಕೂ ಸಂಬಂಧವೇ ಇಲ್ಲ. ದಯವಿಟ್ಟು ಇದನ್ನು ಇಲ್ಲಿಯೇ ಬಿಟ್ಟು ಬಿಡಿ ಕಣ್ಣೀರಿಟ್ಟಿದ್ದ ನಟಿ ಸಂಜನಾ ಗಲ್ರಾನಿ ಅವರಿಗೆ ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಇಂದು ಮುಂಜಾನೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆಯ ಮೇಲೆ ರೇಡ್ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಪಾರ್ಟಿಗಳನ್ನು ಸಂಜನಾ ಆಪ್ತೆ ಪೃಥ್ವಿ ಶೆಟ್ಟಿ ನಡೆಸುತ್ತಿದ್ದು, ಆಕೆಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಈ ದಾಳಿ ನಡೆಸಿದೆ ಎನ್ನಲಾಗಿದೆ.
ರಾಗಿಣಿ ತನಿಖಾಧಿಕಾರಿಗಳಾದ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದ ಆರು ಜನರ ತಂಡ ಇಂದು ಮುಂಜಾನೆ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಸಂಜನಾ ಮನೆಯ ಮೇಲೆ ದಿಢೀರ್ ದಾಳಿ ನಡೆಸಿದೆ. ರಾಹುಲ್ ಹಾಗೂ ಪೃಥ್ವಿ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ರೇಡ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಗಿಣಿ ಮನೆ ಮೇಲೆ ರೇಡ್ ಮಾಡಿದಾಗ ಸಾಕ್ಷಿಗಳ ಸಮಕ್ಷದಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಸಾಕ್ಷಿಗಳ ಸಮಕ್ಷಮ ದಲ್ಲಿ ಸಂಜನಾ ಮನೆಯ ಶೋಧಕಾರ್ಯ ನಡೆದಿದೆ. ಸಿಸಿಬಿ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಹೀಗಾಗಿ ಇಂದು ಬೆಳ್ಳಂ ಬೆಳ್ಳಗೆ ದಿಢೀರ್ ದಾಳಿ ನಡೆಸಿದ್ದಾರೆ. ಗೇಟ್ ತೆಗೆಯುವ ಸದ್ದು ಕೇಳೆ ಸಂಜನಾ ತಾಯಿ ರೇಷ್ಮ ಹೊರ ಬಂದಿದ್ದರು. ನಂತರ ರೇಡ್ ಬಗ್ಗೆ ಸಂಜನಾಗೆ ತಾಯಿ ತಿಳಿಸಿದ್ದರು. ನೀವು ಧಾರಾಳವಾಗಿ ಸರ್ಚ್ ನಡೆಸಬಹುದು ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.
ಶೋಧಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಟಿ ಸಂಜನಾ ಕೂಗಾಡಿದ್ದು, ಮನೆಯಲ್ಲಿ ಏನೂ ಸಿಗದೇ ಇದ್ದರೂ ಏಕೆ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ ಎಂದು ವಾಗ್ವಾದ ನಡೆಸಿದ್ದಾರೆ. ಶೀಘ್ರವೇ ಅವರನ್ನು ಸಿಸಿಬಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: