ದೇಶಪ್ರಮುಖ ಸುದ್ದಿ

ಎಲ್ಎಸಿ ದಾಟಿ ಹೋಗಿಲ್ಲ, ಮೊದಲು ಫೈರಿಂಗ್ ಮಾಡಿದ್ದು ಚೀನಿ ಸೇನೆ: ಭಾರತೀಯ ಸೇನೆ ಸ್ಪಷ್ಟನೆ

ಲಡಾಖ್‌,ಸೆ.8- ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಾವುದೇ ಹಂತದಲ್ಲಿಯೂ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿಲ್ಲ. ಗುಂಡಿನ ದಾಳಿ ಸೇರಿದಂತೆ ಯಾವುದೇ ರೀತಿಯ ಆಕ್ರಮಣಕಾರಿ ವರ್ತನೆ ತೋರಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಭಾರತೀಯ ಸೇನೆ ಎಲ್‌ಎಸಿ ದಾಟಿ ಬಂದಿದೆ. ಅಲ್ಲದೇ ಚೀನಿ ಸೇನೆ ಮೇಲೆ ವಾರ್ನಿಂಗ್‌ ಶಾಟ್‌ ಹಾರಿಸಿದೆ ಎನ್ನುವ ಚೀನಾ ಆರೋಪಕ್ಕೆ ಭಾರತೀಯ ಸೇನೆ ಪ್ರತಿಕ್ರಿಯಿಸಿದೆ. ನಮ್ಮ ಸೇನೆ ಎಲ್‌ಎಸಿ ದಾಟಿ ಹೋಗಿಲ್ಲ , ಚೀನಿ ಸೇನೆಯೇ ಗುಂಡು ಹಾರಿಸಿದ್ದು, ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ವಿಚಾರಕ್ಕೆ ಭಾರತ ಬದ್ಧವಾಗಿದ್ದರೆ ಚೀನಾ ಸೇನೆಯು ಪ್ರಚೋದನಾಕಾರಿ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಮವಾರ ರಾತ್ರಿ ಚೀನಾ ಪಡೆಗಳು ಎಲ್‌ಎಸಿಯ ಮುಂಚೂಣಿ ನೆಲೆಗಳತ್ತ ಬರಲು ಯತ್ನಿಸಿದವು. ಭಾರತದ ಪಡೆಗಳು ಅದನ್ನು ತಡೆಯಲೆತ್ನಿಸಿದವು. ಆಗ ಭಾರತ ಪಡೆಗಳಲ್ಲಿ ಭೀತಿ ಮೂಡಿಸಲು ಚೀನಾ ಸೇನೆಯು ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿತ್ತು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಚೀನಾ ಸೇನೆಯ ಗಂಭೀರ ಪ್ರಚೋದನೆಯ ಹೊರತಾಗಿಯೂ ಭಾರತೀಯ ಪಡೆಗಳು ಸಂಯಮ ಮತ್ತು ಪ್ರಬುದ್ಧತೆಯಿಂದ ವರ್ತಿಸಿವೆ. ಶಾಂತಿ, ಸಂಯಮ ಕಾಪಾಡಲು ನಾವು ಬದ್ಧರಾಗಿದ್ದೇವೆ. ಹಾಗೆಯೇ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಯಾವುದೇ ಕ್ರಮ ಕೈಗೊಳ್ಳಲೂ ಸಿದ್ಧರಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ-ಚೀನಾ ಸೇನಾಪಡೆಗಳ ಮಧ್ಯೆ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿತ್ತು. ಭಾರತೀಯ ಸೇನೆ ನಡೆಸಿದ ‘ಎಚ್ಚರಿಕೆ ದಾಳಿ (ವಾರ್ನಿಂಗ್ ಶಾಟ್‌)’ಗೆ ಪ್ರತಿಯಾಗಿ ನಾವು ದಾಳಿ ನಡೆಸಬೇಕಾಯಿತು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಹೇಳಿತ್ತು. ಇದನ್ನು ಭಾರತೀಯ ಸೇನೆ ನಿರಾಕರಿಸಿದೆ.

ಸೇನೆ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ಪ್ರಗತಿಯಲ್ಲಿ ಇರುವಾಗ ಚೀನಾ ಸೇನೆಯು ಒಪ್ಪಂದಗಳನ್ನು ಉಲ್ಲಂಘಿಸಿ ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸುತ್ತಿದೆ ಎಂದೂ ಭಾರತೀಯ ಸೇನೆ ಆರೋಪಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: