ಪ್ರಮುಖ ಸುದ್ದಿಮೈಸೂರು

ಕಬ್ಬು ಬೆಳೆಯನ್ನು ಪ್ರಧಾನಿ ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ಕೃಷಿ ಸಚಿವರಿಗೆ ಮನವಿ ಸಲ್ಲಿಕೆ

ಮೈಸೂರು,ಸೆ.8:- ಕಬ್ಬು ಬೆಳೆಯನ್ನು ಪ್ರಧಾನಿ ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರಾಜ್ಯ ಸರ್ಕಾರ ಅರಿಶಿನ ಬೆಳೆಯನ್ನು ಪ್ರಧಾನಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಿ ಬೆಳೆ ವಿಮೆ ಯೋಜನೆ ನೋಂದಾಯಿಸಲು ರೈತರಿಗೆ ಗಡುವು ನೀಡಿರುವುದು ಸ್ವಾಗತಾರ್ಹ. ಇದೇ ರೀತಿ ಕಬ್ಬು ಬೆಳೆಯುವ ರೈತರು ಸಹ ಅತಿವೃಷ್ಟಿ, ಅನಾವೃಷ್ಟಿ ಬೆಂಕಿ ಅನಾಹುತಗಳಿಂದ ಕಬ್ಬಿನ ಬೆಳೆಯಿಂದಲೂ ನಷ್ಟ ಅನುಭವಿಸುತ್ತಿದ್ದಾರೆ. ಈ ನಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ಕಬ್ಬು ಬೆಳೆಯಲು ಹಣಕಾಸು ಸಂಸ್ಥೆಗಳಿಂದ ಪಡೆದ ಬ್ಯಾಂಕಿನ ಸಾಲ ತೀರಿಸಲು ಕಷ್ಟವಾಗಿದೆ. ಬೆಳೆ ಚೆನ್ನಾಗಿ ಬಂದರೂ ಕಾರ್ಖಾನೆಗಳು ಕಟಾವು ಮಾಡಲು ವಿಳಂಬ ಮಾಡುವ ಕಾರಣ ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಕಳೆದ ವರ್ಷ ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಕಬ್ಬು ಬೆಳೆ ಸುಮಾರು ಒಂದು ಕೋಟಿ ಟನ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರಿಶಿನ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತಂದಿರುವ ರೀತಿಯಲ್ಲಿಯೇ ಕಬ್ಬು ಬೆಳೆಯನ್ನು ಕೂಡ ಬೆಳೆ ವಿಮೆ ಯೋಜನೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಚರ್ಚೆ ನಡೆಸಿ ತಿಳಿಸುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭ ಕಿರಗಸುರು ಶಂಕರ್, ಅತ್ತಹಳ್ಳಿ ದೇವರಾಜ್ ಸೇರಿದಂತೆ ಹಲವರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: