ಪ್ರಮುಖ ಸುದ್ದಿ

ತೆರಕಣಾಂಬಿ ಕಾಲೇಜು ಉಳಿಸಲು ಸಿಎಂ ಭೇಟಿಗೆ ವಿದ್ಯಾರ್ಥಿಗಳ ನಿರ್ಧಾರ

ರಾಜ್ಯ(ಚಾಮರಾಜನಗರ)ಸೆ.9:- ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿಗೆ ಸ್ಥಳಾಂತರವಾಗಿರುವ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸರ್ಕಾರಿ ಪದವಿ ಕಾಲೇಜನ್ನು ಅಲ್ಲಿಯೇ ಉಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಕಾಲೇಜು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರಾದ ಕೌಶಲ್ಯ, ರಕ್ಷಿತಾ , ರಕ್ಷಿತಾ.ಬಿ, ತೇಜಸ್ವಿನಿ, ಸೂರ್ಯ, ಹಾಜರಾತಿಯ ನೆಪವೊಡ್ಡಿ ಕಾಲೇಜನ್ನು ಸ್ಥಳಾಂತರ ಮಾಡುವ ಆದೇಶ ಹೊರಡಿಸಲಾಗಿದೆ. ಕಾಲೇಜು ಇಲ್ಲದಿದ್ದರೆ ನಾವೆಲ್ಲ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಈಗಾಗಲೇ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.
ಇನ್ನೊಂದು ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ. ಸೆ.11ರಂದು ಬೆಂಗಳೂರಿನ ಮೌರ್ಯ ವೃತ್ತದಿಂದ ಮುಖ್ಯಮಂತ್ರಿ ಅವರ ಮನೆಯವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಿದ್ದೇವೆ. ರೈತ ಸಂಘದವರು ನಮ್ಮ ಜೊತೆಗೆ ಇರಲಿದ್ದಾರೆ ಎಂದರು.
ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಿ.ಎಂ.ನಂಜುಂಡಪ್ಪ ಅವರ ವರದಿ ಪ್ರಕಾರ ಒಂದು ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಿದ್ದರೂ ಆ ಕಾಲೇಜನ್ನು ಮುಂದುವರಿಸಬೇಕು. ಆದರೆ ನಮ್ಮ ಕಾಲೇಜಿನಲ್ಲಿ 51 ವಿದ್ಯಾರ್ಥಿಗಳಿದ್ದರೂ ಸ್ಥಳಾಂತರಗೊಳಿಸಲಾಗಿದೆ ಆಪಾದಿಸಿದರು.
ಉನ್ನತ ಶಿಕ್ಷಣ ಸಚಿವರ ಬಳಿ ಮನವಿ ನೀಡಲು ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರುನೀವು ಪದವಿ ಮಾಡಿ ಮುಂದೆ ಏನು ಮಾಡುತ್ತೀರಾ? ಅದರ ಬದಲು ಕೌಶಲ್ಯ ತರಬೇತಿ ಪಡೆಯಿರಿ. ಆ ಕಾಲೇಜನ್ನು ಕೌಶಲ್ಯ ತರಬೇತಿ ಕೇಂದ್ರ ಮಾಡುತ್ತೇವೆಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬಾರದೇ? ಪಟ್ಟಣದ ಮಕ್ಕಳು ಮಾತ್ರ ಉನ್ನತ ಶಿಕ್ಷಣ ಪಡೆಯಬೇಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಗ್ರಾಮೀಣ ಮಕ್ಕಳು ಶಿಕ್ಷಣ ಪಡೆಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ ಅದೇ ಸರ್ಕಾರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯದಂತೆ ಮಾಡುತ್ತಿದೆ. ತೆರಕಣಾಂಬಿ ಕಾಲೇಜಿನಲ್ಲಿ ಗ್ರಾಮೀಣ ಭಾಗದ 40 ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಈಗ ಸ್ಥಳಾಂತರ ಮಾಡಿದರೆ ಎಲ್ಲರೂ ಶಿಕ್ಷಣ ವಂಚಿತರಾಗಬೇಕಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: