
ಮೈಸೂರು
ಕರ್ನಾಟಕ ರಾಜ್ಯ ಕೃಷಿ ಮಹಾಮಂಡಳದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ
ಮೈಸೂರು,ಸೆ.11:- ಮೈಸೂರು ಜಿಲ್ಲೆಯಿಂದ ತಾಲೂಕು ಎಪಿಎಂಸಿ ಅಧ್ಯಕ್ಷರು ಗಳಿಂದ ಆಯ್ಕೆಯಾಗುವ ಕರ್ನಾಟಕ ರಾಜ್ಯ ಕೃಷಿ ಮಹಾಮಂಡಲ ನಿರ್ದೇಶಕರ (ಒಂದು ಸ್ಥಾನಕ್ಕೆ ) ಚುನಾವಣೆಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಮೈಸೂರು ಎಪಿಎಂಸಿ ಹಾಲಿ ಅಧ್ಯಕ್ಷರಾದ ಬಸವರಾಜ್ ಅವರು 4 ತಾಲೂಕು ಎಪಿಎಂಸಿ ಅಧ್ಯಕ್ಷರ ಮತಗಳನ್ನು ಪಡೆಯುವ ಮೂಲಕ ಅಂದರೆ ಪಿರಿಯಾಪಟ್ಟಣ, ನಂಜನಗೂಡು, ಟಿ ನರಸೀಪುರ ಹಾಗೂ ಮೈಸೂರು ಎಪಿಎಂಸಿ ಅಧ್ಯಕ್ಷರ ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಹುಣಸೂರು ಎಪಿಎಂಸಿ ಅಧ್ಯಕ್ಷರಾದ ಸುಭಾಷ್ ಅವರು ಮೂರು ತಾಲೂಕು ಎಪಿಎಂಸಿ ಅಧ್ಯಕ್ಷರುಗಳ ಮತಗಳನ್ನು ಪಡೆಯುವುದರ ಮೂಲಕ ಅಂದರೆ ಹುಣಸೂರು ,ಕೆಆರ್ ನಗರ ,ಎಚ್ ಡಿ ಕೋಟೆ ಅಧ್ಯಕ್ಷರ ಮತ ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದಾರೆ.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಹಾಗೂ ಜಿಲ್ಲೆಯ ಹಿರಿಯ ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯ್ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ತಾಲೂಕು ಎಪಿಎಂಸಿ ಅಧ್ಯಕ್ಷರ ಸಭೆ ಕರೆದು, ಒಮ್ಮತದ ಅಭ್ಯರ್ಥಿಯಾಗಿ ಬಸವರಾಜ್ ಅವರನ್ನು ಆಯ್ಕೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆ ಒಟ್ಟಾಗಿ ಚುನಾವಣೆ ಎದುರಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು. ಆದ್ದರಿಂದ ಈ ಚುನಾವಣೆ ಕಾಂಗ್ರೆಸ್ ಗೆ ದೊಡ್ಡ ಗೆಲುವನ್ನು ತಂದು ಕೊಟ್ಟಿದೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಇದು ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟ್ಟಿತ್ತು. ಚುನಾವಣೆಯಲ್ಲಿ ಗೆದ್ದ ಬಸವರಾಜ್ ಅವರಿಗೆ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ ಬಿ.ಜೆ ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ ಇತರರು ಅಭಿನಂದನೆ ಸಲ್ಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)