ಪ್ರಮುಖ ಸುದ್ದಿಮೈಸೂರು

ಆಮಂತ್ರಣ ಪತ್ರಿಕೆಯಲ್ಲಿ ಸ್ವಚ್ಛ ಭಾರತ ಚಿಹ್ನೆ ಬಳಕೆ : ಮೋದಿ ಮೆಚ್ಚುಗೆ

ಮೋದಿಯವರ ಸ್ವಚ್ಛ ಭಾರತ ಜನರಲ್ಲಿ ಎಷ್ಟು ಪ್ರಭಾವ ಬೀರಿದೆಯೆಂದರೆ ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ಸ್ವಚ್ಛ ಭಾರತದ ಚಿಹ್ನೆ ಬಳಕೆಯಾಗುವಷ್ಟು.

ಮೈಸೂರು ಮೂಲದ ಉದ್ಯಮಿಯೊಬ್ಬರ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರಂತೆ. ಸ್ವಚ್ಛ ಭಾರತಕ್ಕೆ ಕೈ ಜೋಡಿಸುವ ವ್ಯಕ್ತಿಗಳನ್ನು ಆಗಾಗ ತಮ್ಮ ಮನ್‍ಕೀ ಬಾತ್‍ನಲ್ಲಿ ನೆನಪಿಸಿಕೊಳ್ಳುವ ಪ್ರಧಾನಿ ಮೋದಿ, ಇದೀಗ ಮೈಸೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಮದುವೆ ಆಮಂತ್ರಣದ ಒಳಗಿರುವ  ಸುಂದರ ಆಶಯಕ್ಕಾಗಿ ರೀ ಟ್ವೀಟ್ ಮಾಡಿದ್ದಾರೆ. ಮೈಸೂರಿನ ಡಿ ದೇವರಾಜ್ ಅರಸ್ ರಸ್ತೆಯಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅಕ್ಷಯ್ ಅವರು ಸ್ವಚ್ಛ ಭಾರತ ಲೋಗೋ ಇರುವ ತಮ್ಮ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯನ್ನು ಏಪ್ರಿಲ್ 1 ರಂದು ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಮೋದಿ ಅವರು ಭಾನುವಾರ ಸಂಜೆ ರೀ ಟ್ವೀಟ್ ಮಾಡಿದ್ದು ಈಗ ವೈರಲ್ ಆಗಿದೆ.ಸ್ವಚ್ಛ ಭಾರತದ ಲೋಗೋವನ್ನು ಪ್ರಕಟಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ನಾವು ಮೂಲತಃ ಗುಜರಾತ್‍ನವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್‍ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ ಎಂದು ತಿಳಿಸಿದರು.ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದ್ದು, ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್‍ಗೆ ಮರಳಿದ್ದೆವು. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದರು.

ಅಕ್ಷಯ್ ಅವರ ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಅಕ್ಷಯ್ ಸಂತಸ ಹಂಚಿಕೊಂಡಿದ್ದಾರೆ.ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅಕ್ಷಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ವೇಳೆಗೆ ಈ ಟ್ವೀಟನ್ನು 2,336 ಜನ ರೀ ಟ್ವೀಟ್ ಮಾಡಿದ್ರೆ, 7052 ಮಂದಿ ಲೈಕ್ ಮಾಡಿದ್ದಾರೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು, ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ರಕ್ಷಣಾ ಸಚಿವ ಹಾಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ರೀ ಟ್ವೀಟ್ ಮಾಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: